ಕಾರವಾರ(ಉತ್ತರ ಕನ್ನಡ): ಕರಾವಳಿಯಲ್ಲಿ ಬಂಡಿ ಹಬ್ಬದ ಸಂಭ್ರಮವಿದೆ. ಕಾರವಾರ, ಅಂಕೋಲಾ ಮತ್ತು ಕುಮಟಾ ತಾಲೂಕುಗಳಲ್ಲಿ ಸಾಲು ಸಾಲು ಬಂಡಿ ಹಬ್ಬಗಳು ಆರಂಭವಾಗಿವೆ. ಕಾರವಾರದ ಬಾಂಡಿಶಿಟ್ಟ, ಅಂಕೋಲಾದ ಹಿರೇಗುತ್ತಿ, ತೆಂಕಣಕೇರಿ, ನಾಡು ಮಾಸ್ಕೇರಿ, ಹಿಚ್ಕಡ, ವಂದಿಗೆ, ಕೊಗ್ರೆ, ಹೊಸಕೇರಿ ಗ್ರಾಮಗಳಲ್ಲಿ ಈ ಹಬ್ಬ ನಡೆಯುತ್ತದೆ. ಬಾಂಡಿಶಿಟ್ಟಾದ ಬಂಡಿ ಹಬ್ಬ ಮುಕ್ತಾಯವಾಗಿದ್ದು, ಸಾವಿರಾರು ಭಕ್ತರು ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಗ್ರಾಮ ದೇವತೆಯನ್ನು ಪೂಜಿಸುವ ಈ ಆಚರಣೆಯಲ್ಲಿ ವಾರಗಟ್ಟಲೆ ಧಾರ್ಮಿಕ ವಿಧಿ-ವಿಧಾನಗಳು, ಪೂಜೆ, ತೇರು, ಕೋಳಿ ಬಲಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಾಮಾನ್ಯವಾಗಿ ಏಳು ಅಥವಾ 12 ದಿನಗಳು ನಡೆಯುವ ಈ ಹಬ್ಬದಲ್ಲಿ ಗ್ರಾಮಸ್ಥರಿಂದ ವಿಶೇಷ ಪೂಜೆ ಹಾಗೂ ಕೊನೆಯ ದಿನ ಕೋಳಿ ಬಲಿ ನಡೆಯುತ್ತದೆ.

ಕೊನೆಯ ದಿನ ಕಾರವಾರ ಹಾಗೂ ಅಂಕೋಲಾ ಭಾಗಗಳಲ್ಲಿ ದೇವರು ಹುಯ್ಲು ಚಪ್ಪರ ಕಂಬವನ್ನು ಏರುವ ಪದ್ಧತಿ, ಕುಮಟಾ ಭಾಗದಲ್ಲಿ ಕೊಂಡ ಹಾಯುವ ಆಚರಣೆ ರೂಢಿಯಲ್ಲಿದೆ. ಅಲ್ಲದೇ ಹಬ್ಬದ ಕೊನೆಯ ದಿನಕ್ಕೂ ಮುಂಚಿತವಾಗಿ ಅಕ್ಕ ಪಕ್ಕದ ಗ್ರಾಮಗಳಲ್ಲಿರುವ ಗ್ರಾಮ ದೇವರ ಸಂಬಂಧಿ ದೇವರುಗಳನ್ನು ಹಬ್ಬಕ್ಕೆ ಕರೆಯುವ ಸಾಂಪ್ರದಾಯವೂ ಇದೆ. ಕೋಳಿ ಬಲಿ ಕೊಡುವ ಕಾರಣ ಅಂಕೋಲಾ ಹಾಗೂ ಕಾರವಾರಯಲ್ಲಿ ನಾಟಿ ಕೋಳಿಯ ವ್ಯಾಪಾರ ಜೋರಾಗಿದೆ.

ಬಂಡಿ ಹಬ್ಬವು ಕರಾವಳಿ ತಾಲೂಕುಗಳಲ್ಲಿ ನಡೆದರೂ ಘಟ್ಟದ ಮೇಲಿನ ಮತ್ತು ಗೋವಾ ರಾಜ್ಯದಿಂದಲೂ ಭಕ್ತರು ಆಗಮಿಸಿ ಈ ಹಬ್ಬದಲ್ಲಿ ಭಾಗಿಯಾಗುವುದು ವಿಶೇಷ. ಅಂಕೋಲಾದಲ್ಲಿ ಮೇ 12 ಮತ್ತು 13ರಂದು ಬಂಡಿ ಹಬ್ಬ ನಡೆಯಲಿದೆ. ತೆಂಕಣಕೇರಿ ಗ್ರಾಮದಲ್ಲಿ ಮೇ 14 ಮತ್ತು 15, ಹೊಸಕೇರಿ ಹಾಗೂ ವಂದಿಗೆ ಗ್ರಾಮಗಳಲ್ಲಿ ಜೂ.1 ಮತ್ತು 2ರಂದು ಬಂಡಿ ಹಬ್ಬ ಜರುಗಲಿದೆ.

ಇದನ್ನೂ ಓದಿ: ಸುಳ್ಯದಲ್ಲೊಂದು ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ವಿಶಿಷ್ಟ ಆಚರಣೆ: ಜಗಳ ಬಿಡಿಸಿ ಸಂದೇಶ ನೀಡುವ ದೈವ!

ಇದನ್ನೂ ಓದಿ: ಶ್ರೀ ಕ್ಷೇತ್ರ ಕಟೀಲಿನಲ್ಲಿ 'ತೂಟೆದಾರ' ಸೇವೆ: ಎರಡು ಗ್ರಾಮಗಳ ನಡುವೆ ರೋಮಾಂಚಕ ಅಗ್ನಿಯಾಟ!