ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವರ ಸಮೀಪದ ಬಗ್ಗುಂಜಿ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆ 25ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇತುವೆ ದಾಟಲು ಹರಸಾಹಸಪಡುವ ಸ್ಥಿತಿ ಉಂಟಾಗಿದೆ.

''ಮಳೆಯ ಪ್ರಮಾಣ ಜಾಸ್ತಿಯಾದರೆ ಈ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. ಸೇತುವೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಎದುರಾಗುತ್ತಿದೆ. ಇದು ಹಳೆಯ ಸಮಸ್ಯೆಯಾಗಿದ್ದರೂ, ಇದುವರೆಗೆ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಿಲ್ಲ. ತುರ್ತು ಕ್ರಮ ಕೈಗೊಳ್ಳಲು ಸಹ ಮುಂದೆ ಬಂದಿಲ್ಲ. ಸೇತುವೆ ನಿರ್ಮಾಣಕ್ಕಾಗಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನಮ್ಮ ಸಮಸ್ಯೆ ಕಡೆಗಣಿಸಲಾಗುತ್ತಿದೆ'' ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ನಾವು ನಮ್ಮ ಕೆಲಸ ಬಿಟ್ಟು ಪ್ರತಿದಿನ ಮಕ್ಕಳನ್ನು ಕರೆದುಕೊಂಡು ಬಂದು ಈ ಸೇತುವೆಯ ಒಂದು ದಡದಿಂದ ಮತ್ತೊಂದು ದಡಕ್ಕೆ ಬಂದು ಬಿಡಬೇಕು. ಆರೋಗ್ಯ ಸಮಸ್ಯೆಯಾದಲ್ಲಿ ಆಸ್ಪತ್ರೆಗೆ ತೆರಳಬೇಕೆಂದ್ರೆ ಬೇರೆ ಮಾರ್ಗ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಕಾಲ ಕಳೆಯುತ್ತಿದ್ದೇವೆ. ಒಂದು ಕುಗ್ರಾಮದಲ್ಲಿ ಬದುಕುತ್ತಿದ್ದೇವೆ ಅಂದರೂ ತಪ್ಪಾಗಲಾರದು. ಕಳೆದ ಬಾರಿ ಸ್ಥಳೀಯ ಶಾಸಕರು, ಸಚಿವರು ಬಂದು ನೋಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅದನ್ನು ನೆರವೇರಿಸಿಲ್ಲ. ಆದಷ್ಟು ಬೇಗ ಈ ಸೇತುವೆಯನ್ನು ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಬೇಕಾಗುತ್ತದೆ'' ಎಂದು ಗ್ರಾಮಸ್ಥರು ಎಚ್ಚರಿಕೆ ರವಾನಿಸಿದ್ದಾರೆ.

''ನಿರಂತರ ಮಳೆಯಿಂದ ನೆತ್ತಿಚೌಕ ಗ್ರಾ.ಪಂ. ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆಯ ಮತ್ತೊಂದು ಭಾಗದಲ್ಲಿ ಕಂದಕ ಇರುವುದರಿಂದ ಕುಸಿತದ ಆತಂಕ ಮನೆ ಮಾಡಿದೆ. ಹಾಗಾಗಿ ತಕ್ಷಣವೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ'' ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ವಿವಿಧೆಡೆ ಒಂದು ವಾರ ಮತ್ತೆ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - KARNATAKA RAIN FORECAST