ಮೈಸೂರು: ಹೆಚ್.ಡಿ.ಕೋಟೆಯಲ್ಲಿ ಕಳೆದ ಮಧ್ಯರಾತ್ರಿ ರೈತರೊಬ್ಬರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಅಡಿಕೆ ಗಿಡಗಳನ್ನು ಮುರಿದು ಹಾಕಿ, ಶೆಡ್‌ಗೆ ಹಾನಿ ಮಾಡಿದೆ.

ಡಿ.ಬಿ.ಕುಪ್ಪೆಯ ರೈತ ವೆಂಕಟೇಶ್ ಅವರ ಜಮೀನಿಗೆ ಆನೆ ನುಗ್ಗಿದೆ. ಆನೆ ತೋಟಕ್ಕೆ ಬಂದಿರುವುದನ್ನು ಅರಿತ ರೈತ ಕೂಡಲೇ ಲೈಟ್ ಹಾಕಿ ಶಬ್ದ ಮಾಡಿದ್ದಾರೆ. ಆದರೆ, ಕಾಡಾನೆ ಜಮೀನಿನಿಂದ ಹೋಗದೆ ರೈತನ ಮೇಲೆ ದಾಳಿ ಮಾಡಲು ಮನೆಯ ಬಳಿ ಬಂದಿದ್ದು, ಶೆಡ್ ಹಾನಿಗೊಳಿಸಿದೆ.

ಹೊಸೂರು, ಕಡೆಗದ್ದೆ, ಉಡಕನಮಳ, ಡಿ.ಪಿ.ಕುಪ್ಪೆ, ಗೋಳೂರು, ಜೋಮ್ಕೊಲ್ಲಿ ಮುಂತಾದ ಕಾಡಂಚಿನ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳವಿದೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ. ಕಂದಕ, ರೈಲ್ವೆ ಕಂಬಿ ಅಥವಾ ಸೋಲಾರ್ ಬೇಲಿ ಅಳವಡಿಸಿ ಜನರ ಪ್ರಾಣ ಉಳಿಸಬೇಕು ಎಂದು ವೆಂಕಟೇಶ್ ಮನವಿ ಮಾಡಿದ್ದಾರೆ.

ಮನೆ ಮೇಲೆ ದಾಳಿ: ಡಿ.ಬಿ.ಕುಪ್ಪೆ ವ್ಯಾಪ್ತಿಯ ಮಚ್ಚೂರು ಗ್ರಾಮದಲ್ಲಿ ಬಲರಾಮ ಎಂಬವರ ಮನೆ ಮೇಲೂ ದಾಳಿ ಮಾಡಿದ ಆನೆ, ಹಂಚುಗಳನ್ನು ಪುಡಿ ಮಾಡಿದೆ. ಮನೆ ಹಿತ್ತಲಲ್ಲಿ ಕಾಣಿಸಿಕೊಂಡ ಆನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲಿ ಹಲವಾರು ಕುಟುಂಬಗಳು ಸಣ್ಣಸಣ್ಣ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದು, ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಒಂಟಿ ಸಲಗ ದಾಳಿಗೆ VISL ವಸತಿಗೃಹದ ಕಾವಲುಗಾರ ಬಲಿ