ಮೂಳೂರು (ಉಡುಪಿ) : ಕರಾವಳಿಯ ಪ್ರಮುಖ ಸಮಸ್ಯೆ ಕಡಲು ಕೊರೆತದ ಕುರಿತಂತೆ ಸಿಎಂ ಸೂಚನೆಯಂತೆ ತಜ್ಞರ ತಂಡದಿಂದ ವೈಜ್ಞಾನಿಕ ಅಧ್ಯಯನ ನಡೆಸಿ 300 ಕೋಟಿ ರೂ.ಗಳ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬುಧವಾರ ಉಡುಪಿ ಜಿಲ್ಲೆಗೆ ಆಗಮಿಸಿದ ಸಚಿವರು, ಕಾಪು ತಾಲೂಕು ಮೂಳೂರು ಗ್ರಾಮದ ತೊಟ್ಟಂನಲ್ಲಿ ಕಡಲು ಕೊರೆತದಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದರು.

ಕಳೆದ 20-30 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ನಿರಂತರ ಸಮಸ್ಯೆಗೆ ಕಾರಣವಾಗುತ್ತಿರುವ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮದ್ರಾಸ್ ಐಐಟಿ ತಜ್ಞರು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಅದರಂತೆ ಪ್ರತಿ 100 ಮೀಟರ್ಗೆ 15 ಕೋಟಿ ರೂಪಾಯಿ ಖರ್ಚು ಬರುವುದಾಗಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಇದನ್ನು ಪರಿಶೀಲಿಸಬೇಕಾಗಿದೆ ಎಂದ ಸಚಿವರು, ಮುಖ್ಯಮಂತ್ರಿಗಳ ಸೂಚನೆಯಂತೆ ಕರಾವಳಿಯ ಮೂರು ಜಿಲ್ಲೆಗಳಿಗೆ ತಲಾ ನೂರು ಕೋಟಿಯಂತೆ ಒಟ್ಟು 300 ಕೋಟಿ ರೂ. ಗಳಿಗೆ ಪ್ರಸ್ತಾಪ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಳೆಗಾಲದಲ್ಲಿ ಭೂ ಕುಸಿತ ಕಂಡುಬರುವ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಲ್ಲಿ ಸಮಸ್ಯೆ ಪರಿಹಾರಕ್ಕೆ 500 ಕೋಟಿ ರೂ. ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಲ್ಲಿ ತಡೆಗೋಡೆಯಂಥ ಶಾಶ್ವತ ಪರಿಹಾರ ರೂಪಿಸಲು ತಿಳಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಪ್ರಸಿದ್ಧ ಯಾತ್ರಾಸ್ಥಳ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಮಧ್ಯೆ ಕುಸಿತ: ಎರಡು ದಿನ ಪ್ರವೇಶ ನಿರ್ಬಂಧ - TOURISTS BANNED