ದಾವಣಗೆರೆ: ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಓವರ್ ಹೆಡ್ ಟ್ಯಾಂಕ್ ಕುಸಿದು ಬಿದ್ದು ಎರಡು ಮನೆಗಳಿಗೆ ಹಾನಿಯಾದ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಮಡಿವಾಳರ ಬೀದಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ವೇಳೆ ಟ್ಯಾಂಕ್ ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ.

ಅಧಿಕಾರಿಗಳು ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್ ತೆರವು ಮಾಡದೇ ನಿರ್ಲಕ್ಷ್ಯ ವಹಿಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯಾದ ಮನೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭಾರಿ ಮಳೆಗೆ ಕುಸಿದು ಬಿದ್ದ ಕಟ್ಟಡ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಮೂಡಿಗೆರೆ ತಾಲೂಕಿನ ಗಂಗನಮಕ್ಕಿಯಲ್ಲಿ ಮಂಜುನಾಥ್ ಹಾಗೂ ಗಿರೀಶ್ ಅವರಿಗೆ ಸೇರಿದ ಕಟ್ಟಡವು ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಈ ವೇಳೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಹತ್ತು ಮಂದಿ ಕಾರ್ಮಿಕರು ಹೊರಗೆ ಒಂದು ಪ್ರಾಣಾಪಾಯದಿಂದ ಪಾರಾಗಿದ್ದರು. ಒಂದು ಎಲೆಕ್ಟ್ರಿಕ್ ಅಂಗಡಿ ಜೊತೆಗೆ, ಒಂದು ಮಾರುತಿ ವ್ಯಾನ್, ಎರಡು ಬೈಕುಗಳು ಸೇರಿದಂತೆ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿತ್ತು.

ಇದನ್ನೂ ಓದಿ: ಡಿವೈಡರ್ಗೆ ಡಿಕ್ಕಿ ಹೊಡೆದು ಮನೆಯ ಕಾಂಪೌಂಡ್ ಗೋಡೆ ಏರಿ ನಿಂತ ಕಾರು!: ವಿಡಿಯೋ