ರಾಯಚೂರು: ಕೃಷ್ಣಾ ನದಿ ಮೈದುಂಬಿದ ಹಿನ್ನೆಲೆಯಲ್ಲಿ ನಾರಾಯಣಪುರ(ಬಸವಸಾಗರ) ಜಲಾಶಯಕ್ಕೆ ಲಕ್ಷಾಂತರ ಕ್ಯೂಸೆಕ್ಸ್ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ನಾರಾಯಣಪುರ ಜಲಾಶಯದ ಪ್ರಸ್ತುತ ಮಟ್ಟ 491.35 ಮೀಟರ್ ಇದೆ. ಕಳೆದ ಒಂದು ಗಂಟೆಯಲ್ಲಿ 1,35,000 ಕ್ಯೂಸೆಕ್ಸ್ ಒಳಹರಿವು ಬಂದಿದೆ. ಹಾಗೆಯೇ ಹೊರಹರಿವು 1,08,860 ಕ್ಯೂಸೆಕ್ಸ್ ಇದ್ದು, 25 ಕ್ರಸ್ಟ್ ಗೇಟ್ಗಳ ಮೂಲಕ ಹರಿಸಲಾಗುತ್ತಿದೆ . 33.313 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 29.278 ಟಿಎಂಸಿ ನೀರು ಸಂಗ್ರಹವಾಗಿದೆ.

ಅಲ್ಲದೇ ನಾರಾಯಣಪುರ ಬಲದಂಡೆ ಕಾಲುವೆಗೆ 1,200 ಕ್ಯೂಸೆಕ್ಸ್, ಎಡದಂಡೆ ನಾಲೆಗೆ 4000 ಕ್ಯೂಸೆಕ್ಸ್ ನೀರನ್ನು ಕಾಲುವೆ ಮೂಲಕ ಕೃಷಿ ಚಟುವಟಿಕೆಗಳಿಗೆ ಹರಿಸಲಾಗುತ್ತಿದೆ.

ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುಗಡೆಯಿಂದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದ್ದು, ನಡುಗಡ್ಡೆ ಪ್ರದೇಶಗಳಲ್ಲಿ ರಸ್ತೆ ಸಂಚಾರ ಕಡಿತವಾಗಲಿದೆ. ಲಿಂಗಸೂಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳ ನದಿ ದಡದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.

ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಹರಿಬಿಟುವ ವೇಳೆ ನೀರು ಹಾಲಿನ ನೊರೆಯಂತೆ ಉಕ್ಕಿ ಹರಿಯುತ್ತಿದ್ದು, ಈ ರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಕಂಪ್ಲಿ ಸೇತುವೆ ಮುಳುಗಡೆ ಭೀತಿ, ಬಳ್ಳಾರಿ - ಕೊಪ್ಪಳ ನೇರ ಸಂಪರ್ಕ ಸ್ಥಗಿತ