ಹಾವೇರಿ: ತಮಗೆ ಸಿಕ್ಕ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ತಂದು ಕೊಡುವ ಮೂಲಕ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಬಸವನಾಳ ಗ್ರಾಮದ ಲಲಿತಾ ಎಂಬ ಮಹಿಳೆ ಚಿನ್ನದ ಸರ ಕಳೆದುಕೊಂಡಿದ್ದರು. ಶಿಗ್ಗಾಂವ್ ತಾಲೂಕು ಹುಲಗೂರು ಗ್ರಾಮಕ್ಕೆ ಆಗಮಿಸಿದ್ದ ವೇಳೆ ಲಲಿತಾ ಹಾಕಿಕೊಂಡಿದ್ದ ಚಿನ್ನದ ಸರ ಕಳೆದುಹೋಗಿತ್ತು. ಬಳಿಕ ಹುಲಗೂರು ಗ್ರಾಮದ ಎಟಿಎಂ ಬಳಿ ಸಿಕ್ಕ ಸರವನ್ನು ಪ್ರಭು ಎಂಬವರು ಹುಲಗೂರ ಠಾಣೆಗೆ ತಂದು ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

ಇದೇ ವೇಳೆ, ಹುಲಗೂರ ಪೊಲೀಸ್ ಠಾಣೆ ಪಿಎಸ್ಐ ಪರಶುರಾಮ ಕಟ್ಟಿಮನಿ ಪ್ರಭು ಅವರ ಪ್ರಾಮಾಣಿಕತೆ ಮೆಚ್ಚಿ, ಅವರ ತಾಯಿ ಸೇರಿ ಇಬ್ಬರಿಗೂ ಸಹ ಸನ್ಮಾನ ಮಾಡಿ ಗೌರವಿಸಿದ್ದಾರೆ.

ಪ್ರತ್ಯೇಕ ಘಟನೆ: ಕಳೆದ ಮೇ ತಿಂಗಳಿನಲ್ಲಿ ಬೆಳಗಾವಿಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಅಪ್ಪಯ್ಯ ಸ್ವಾಮಿ ಹಾಗೂ ಚಂದ್ರಯ್ಯ ಸ್ವಾಮೀಜಿ ರಥೋತ್ಸವ ಸಂದರ್ಭ ಮಹಿಳೆಯೊಬ್ಬರು 30 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದರು. ಆಗ ಸಾವಿರಾರು ಜನರ ಮಧ್ಯೆ ಶಿವಾನಂದ ಸಿದ್ದಪ್ಪ ಬಿಳ್ಳೂರ ಎಂಬವರಿಗೆ ಚಿನ್ನದ ಸರ ಸಿಕ್ಕಿತ್ತು. ಅದನ್ನು ಅವರು ಬಚ್ಚಿಡದೆ, ವೇದಿಕೆಗೆ ತೆರಳಿ ಧ್ವನಿವರ್ಧಕದ ಮೂಲಕ ತಿಳಿಸಿ, ವಾರಸುದಾರರಿಗೆ ಹಸ್ತಾಂತರಿಸಿದ್ದರು.

ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು: ಕಲಬುರಗಿ ಮೂಲದ ಮೂವರು ಯುವತಿಯರ ಬಂಧನ