ಶಿವಮೊಗ್ಗ : ಟಿವಿಎಸ್ ಸ್ಕೂಟರ್ನಲ್ಲಿ ಅಡಗಿಕೊಂಡಿದ್ದ ನಾಗರಹಾವೊಂದನ್ನು ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ್ದಾರೆ.

ಶಿವಮೊಗ್ಗದ ಹೊರ ವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುವ ಸುಮ ಎಂಬುವರ ಟಿವಿಎಸ್ ಜ್ಯೂಪಿಟರ್ ಬೈಕ್ನಲ್ಲಿ ಈ ಹಾವು ಸೇರಿಕೊಂಡಿತ್ತು.

ಸುಮ ಅವರು ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ಡ್ಯೂಟಿಗೆಂದು ಹೋದಾಗ ಇವರ ಬೈಕ್ನಲ್ಲಿ ಹಾವು ಸೇರಿಕೊಂಡಿದ್ದನ್ನು ಆಸ್ಪತ್ರೆಯ ಡಾ. ಸುನೀಲ್ ನಾಯ್ಕ್ ಅವರು ನೋಡಿದ್ದರು. ನಂತರ ಈ ಬಗ್ಗೆ ಸುಮ ಅವರಿಗೆ ತಿಳಿಸಿದ್ದಾರೆ. ಸುಮ ಅವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದರು.

ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬಂದ ಸ್ನೇಕ್ ಕಿರಣ್ ಅವರು ಮೊದಲು ಬೈಕ್ ಅನ್ನು ಪರಿಶೀಲಿಸಿದರು. ಆದರೆ ಹಾವು ಮಾತ್ರ ಕಂಡು ಬಂದಿಲ್ಲ. ಕೊನೆಗೆ ಮೆಕ್ಯಾನಿಕ್ ಓರ್ವರನ್ನು ಸ್ಥಳಕ್ಕೆ ಕರೆಯಿಸಿ ಬೈಕ್ ಸೀಟ್ ಕೆಳಭಾಗವನ್ನು ಬಿಚ್ಚಿದಾಗ ಅಲ್ಲಿ ಹಾವು ಬಚ್ಚಿಟ್ಟುಕೊಂಡಿರುವುದು ಕಂಡಿದೆ. ಸುಮಾರು ಎರಡೂವರೆ ಅಡಿ ಉದ್ದವಿದ್ದ ನಾಗರಹಾವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದು ಚೀಲದಲ್ಲಿ ಹಾಕಿ, ನಂತರ ಅರಣ್ಯ ಇಲಾಖೆಯವರ ಅನುಮತಿಯೊಂದಿಗೆ ಕಾಡಿಗೆ ಬಿಟ್ಟು ಬಂದಿದ್ದಾರೆ.

ಈ ಕುರಿತು ಸ್ನೇಕ್ ಕಿರಣ್ ಅವರು ಈಟಿವಿ ಭಾರತ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, 'ಮಳೆಯ ವಾತಾವರಣ ಇದ್ದ ಕಾರಣಕ್ಕೆ ಹಾವು ಸ್ವಲ್ಪ ಬೆಚ್ಚಗಿನ ವಾತಾವರಣವನ್ನು ಹುಡುಕುತ್ತದೆ. ಹೀಗಾಗಿ, ನಾಗರಹಾವು ಬೈಕ್ನಲ್ಲಿ ಸೇರಿಕೊಂಡಿರಬಹುದು. ಬೈಕ್ ಚಲಿಸಿಕೊಂಡು ಬಂದು ನಿಂತಾಗ ಸ್ವಲ್ಪ ಹೀಟ್ ಆಗಿರುತ್ತದೆ. ಇದರಿಂದಾಗಿ ಹಾವು ಬೈಕ್ನಲ್ಲಿ ಸೇರಿಕೊಂಡಿರಬಹುದು' ಎಂದಿದ್ದಾರೆ.

ಇದನ್ನೂ ಓದಿ : ಕಳಸದಲ್ಲಿ ಅಪರೂಪದ ಮಲಬಾರ್ ಪಿಟ್ ವೈಪರ್ ಹಾವು ಪತ್ತೆ: ವಿಡಿಯೋ - MALABAR PIT VIPER SNAKE