ದಾವಣಗೆರೆ: ಇತ್ತೀಚೆಗೆ ದಾವಣಗೆರೆಯಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ದಿನ 10-15 ಜನರ ಮೇಲೆ ದಾಳಿ ಮಾಡಿರುವ ಘಟನೆ ನಗರದ ಹಳೇಕುಂದವಾಡದಲ್ಲಿ ನಡೆದಿದೆ.

ನಾಯಿ ದಾಳಿಯಿಂದ ಗಾಯಗೊಂಡವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಸೇರಿ ಐವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗೆ ಒಳಪಡಿಸಲಾಗಿದೆ. ಭಾವನ(11) ಆಶಾ (8), ಕರಿಬಸಮ್ಮ (45) ಅನಿಲ್ ಕುಮಾರ್ (36) ಗಂಭೀರವಾಗಿ ಗಾಯಗೊಂಡವರು. ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಪಾಲಿಕೆ ನಿರ್ಲಕ್ಷ್ಯದಿಂದ ಪದೇ ಪದೇ ಬೀದಿನಾಯಿಗಳ ದಾಳಿಗೊಳಗಾಗುತ್ತಿದ್ದೇವೆ ಎಂದು ಹಳೇ ಕುಂದವಾಡ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಕುಂದವಾಡ ನಿವಾಸಿ ಸಣ್ಣನಿಂಗಪ್ಪ ಪ್ರತಿಕ್ರಿಯಿಸಿ, "44ನೇ ವಾರ್ಡ್ ಹಳೇಕುಂದವಾಡದಲ್ಲಿ ನಾಯಿಯೊಂದು 10-15 ಜನರ ಮೇಲೆ ದಾಳಿ ಮಾಡಿದೆ. ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಾಲೆ ಬಿಟ್ಟಾಗ ನಾಯಿ ದಾಳಿ ನಡೆಸಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಲು, ಕೈ, ತಲೆ, ಕಣ್ಣು ಹೀಗೆ ಹಲವೆಡೆ ಗಾಯಗಳಾಗಿವೆ. ಊರಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದೀಗ ದಾಳಿ ಮಾಡಿರುವ ನಾಯಿ ಕೂಡ ನಮ್ಮ ಊರಿದ್ದೇ" ಎಂದರು.

ಇದನ್ನೂ ನೋಡಿ: ದಾವಣಗೆರೆ: ಒಂದೇ ದಿನ ಐವರ ಮೇಲೆ ಬೀದಿನಾಯಿ ದಾಳಿ, ಮೂವರು ಮಕ್ಕಳಿಗೆ ಗಂಭೀರ ಗಾಯ