ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯದೈವ ಶ್ರೀ ಸಿದ್ಧಾರೂಢರ ಪುಣ್ಯಾರಾಧನೆ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಭಾನುವಾರ ಜಲರಥೋತ್ಸವ ಸಂಭ್ರಮದಿಂದ ಜರುಗಿತು. ಪುಣ್ಯಾರಾಧನೆ ಅಂಗವಾಗಿ ಮಠದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಜರುಗಿದ ಜಲರಥೋತ್ಸವವನ್ನು (ತೆಪ್ಪೋತ್ಸವ) ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಶ್ರಾವಣ ಮಾಸದಲ್ಲಿ ವಿಶಿಷ್ಟ ರೀತಿಯ ಜಲರಥೋತ್ಸವವನ್ನು ಆಚರಿಸಲಾಗುತ್ತದೆ. ತೆಪ್ಪೋತ್ಸವದ ವೇಳೆ ಭಕ್ತರು ಸಿದ್ಧಾರೂಢ ಮಹಾರಾಜ ಕಿ ಜೈ ಎಂಬ ಜಯಘೋಷಗಳನ್ನು ಮೊಳಗಿಸಿದರು.

ರಾಜ್ಯದಲ್ಲಿ ಮಾತ್ರವಲ್ಲದೆ ಅನ್ಯ ರಾಜ್ಯದ ಭಕ್ತರು ಕೂಡ ಆಗಮಿಸಿ ಸಿದ್ದಾರೂಢರ ನಾಮಸ್ಮರಣೆ ಮಾಡಿದರು. ಬಿದಿರಿನಿಂದ ಸಿದ್ಧಪಡಿಸಿದ್ದ ತೇರಿನಲ್ಲಿ ಸಿದ್ಧಾರೂಢರ ಹಾಗೂ ಗುರುನಾಥರೂಢರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಪೂಜೆ ಸಲ್ಲಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರು ಪುಷ್ಕರಣಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಡೋಲು ಮತ್ತು ಹಲಗೆ ವಾದನ ಜಲರಥೋತ್ಸವದ ಕಳೆ ಹೆಚ್ಚಿಸಿತು. ಉತ್ಸವಮೂರ್ತಿ ಕೆರೆಯಂಗಳಕ್ಕೆ ಬರುತ್ತಿದ್ದಂತೆ ಭಕ್ತರು ಓಂ ನಮಃ ಶಿವಾಯ, ಸಿದ್ಧಾರೂಢ ಸ್ವಾಮೀಜಿಗೆ ಶರಣು ಎಂದು ಘೋಷಣೆ ಹಾಕಿದರು. ಭಕ್ತರು ಸಿದ್ಧಾರೂಢರ ಕುರಿತ ಪ್ರತಿ ಹಾಡಿಗೂ ದನಿಗೂಡಿಸಿ ಭಕ್ತಿ ಮೆರೆದರು.

ಇದನ್ನೂ ನೋಡಿ: ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವದ ಎರಡನೇ ದಿನ: ಪ್ರಹ್ಲಾದ ರಾಜರ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆ