ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ವರದಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ಗೆ ಬಿದ್ದ ಘಟನೆ ಹಾವೇರಿ ತಾಲೂಕಿನ ಮರಡೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೆಣಸಿನಕಾಯಿ ಚೀಲ ತೆಗೆದುಕೊಂಡು ಹೋಗುವಾಗ ಘಟನೆ: ಟ್ರ್ಯಾಕ್ಟರ್ನಲ್ಲಿ ಮೂವರಿದ್ದು, ಅವರನ್ನು ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಗ್ರಾಮದ ಸುರೇಶ ದೊಡ್ಡಗೌಡರ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಆಗಿದ್ದು, ನದಿಗೆ ಬಿದ್ದಿದೆ. ಮೆಣಸಿನಕಾಯಿ ಚೀಲವನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಈ ಅವಗಡ ಸಂಭವಿಸಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಸಣ್ಣನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಬ್ರಿಡ್ಜ್ ಕಂ ಬ್ಯಾರೇಜ್ಗೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಈ ಬಗ್ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, "ಈ ಸ್ಥಳದಲ್ಲಿ ಸುರಕ್ಷತೆ ಇಲ್ಲ. ಇದು ಡೇಂಜರ್ ಝೋನ್ ಆಗಿದೆ. ತುರ್ತು ಸಮಯದಲ್ಲಿ ಯಾರನ್ನಾದರೂ ರಕ್ಷಿಸಲು ಇಲ್ಲಿ ಯಾವ ಉಪಕರಣಗಳೂ ಇಲ್ಲ. ಈಗಾಗಲೇ ಇದೇ ತರಹ ಘಟನೆಯಿಂದ ಮೂವರನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ" ಮನವಿ ಮಾಡಿದರು.

ಇದನ್ನೂ ಓದಿ: ರಾಯಚೂರು: ತುಂಬಿ ಹರಿಯುವ ನದಿ ದಾಟಿ ವೃದ್ಧೆಯ ಶವಸಂಸ್ಕಾರ ಮಾಡಿದ ಜನರು