ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳು ಕಾಫಿ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ಹಾಗೂ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದ ಬೆನ್ನಲ್ಲೇ, ನಿನ್ನೆ ಶೃಂಗೇರಿ ತಾಲೂಕಿಗೆ ಪ್ರವೇಶ ಮಾಡಿದ್ದವು.

ಕಾಡಾನೆಗಳು ಹಾಗೂ ಅದರ ಮರಿಗಳು ರಸ್ತೆಯಲ್ಲಿ ಸಂಚಾರ ಮಾಡಿ ತುಂಗಾ ನದಿಯಲ್ಲಿ ಸ್ನಾನ ಮಾಡಿ, ತಮ್ಮದೇ ಆದ ಕ್ಷಣಗಳನ್ನು ಕಳೆದಿವೆ. ಅಲ್ಲದೇ, ಈಗ ರೈತರ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಲು ಪ್ರಾರಂಭಿಸಿವೆ. ನಿನ್ನೆ ಈ ಕಾಡಾನೆಗಳು ಶೃಂಗೇರಿ ಪ್ರವೇಶ ಮಾಡಿದ ಬೆನ್ನಲ್ಲೇ ಕೆಲ ರೈತರು ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳಿಂದ ಶೃಂಗೇರಿ ಪಟ್ಟಣದ ವಿವಿಧ ಭಾಗಗಳಲ್ಲಿ ಹಾಗೂ ಕಾಡಂಚಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು, ನಿನ್ನೆ ಪಟ್ಟಣದ ಮಧ್ಯಭಾಗಕ್ಕೆ ಬಂದು ಸಾರ್ವಜನಿಕರಿಗೆ ದರ್ಶನ ನೀಡಿದ್ದವು. ಇಂದು ಶೃಂಗೇರಿ ದೇವಾಲಯದ ನರಸಿಂಹನ ವನ ಬಳಿ ಬೀಡು ಬಿಟ್ಟಿದ್ದ ಎರಡು ಕಾಡಾನೆಗಳು ಇದೀಗ ತಾಲೂಕಿನ ಹೊಸ ಹಕ್ಲು, ಕುಂತೂರು, ಸೇರಿದಂತೆ ಹಲವು ಗ್ರಾಮಗಳ ಬಳಿ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡಿವೆ.

ಒಂದು ಕಾಡಾನೆ ಗುಂಪು ತುಂಗಾ ನದಿ ತಟದ ಕಾಡಿನಲ್ಲಿ ಬೀಡು ಬಿಟ್ಟಿದ್ದು, ಮತ್ತೊಂದು ಆನೆಯ ಗುಂಪು ತಾಲೂಕಿನ ಎರಡರಿಂದ ಮೂರು ಗ್ರಾಮಗಳ ತೋಟಗಳಿಗೆ ನುಗ್ಗಿ ದಾಳಿ ಮಾಡಲಾರಂಬಿಸಿವೆ. ಈ ಬಗ್ಗೆ ಬೆಳಗ್ಗೆ 6 ಗಂಟೆಯಿಂದಲೇ ಅರಣ್ಯ ಸಿಬ್ಬಂದಿ ಕುಂತುರು, ಹೊಸ ಹಕ್ಲು ಗ್ರಾಮಸ್ಥರಿಗೆ ಮೈಕ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯ ಹತ್ತಾರು ಸಿಬ್ಬಂದಿ ರಸ್ತೆಯಲ್ಲಿ ಹಾಗೂ ಕಾಡಾನೆಗಳು ಬೀಡು ಬಿಟ್ಟಿರುವ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದಾರೆ.

ಇದನ್ನೂ ಓದಿ: ಕಾಡಾನೆ ಮಾನವ-ಸಂಘರ್ಷಕ್ಕೆ ಕೊನೆಯ ತಾಂತ್ರಿಕ ಅಸ್ತ್ರ 'ಥರ್ಮಲ್ ಡ್ರೋನ್ ಸ್ಕ್ವಾಡ್' - THERMAL DRONE SQUAD