ಶಿರಸಿ(ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದೆ. ಶಿರಸಿ ತಾಲೂಕಿನ ಶಿರಗಣಿ ಗ್ರಾಮದ ಸಾತ್ವಿಕ್ ಭಟ್ ಎಂಬುವವರ ಮನೆಯಲ್ಲಿ ಗುರವಾರ ರಾತ್ರಿ ಮನೆಗೆ ಚಿರತೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಮಧ್ಯರಾತ್ರಿಯಲ್ಲಿ ನಾಯಿ ಬೊಗಳುತಿದ್ದುದನ್ನು ಗಮನಿಸಿದ ಮನೆಯವರು ನೋಡುವಾಗ ಚಿರತೆ ಮನೆಯಿಂದ ಹೊರಹೋಗಿದೆ. ಸಿಸಿ ಕ್ಯಾಮರಾದಲ್ಲಿ ಚಿರತೆ ಮನೆ ಬಾಗಿಲಿನಲ್ಲಿ ಓಡಾಡಿದ ದೃಶ್ಯಗಳು ಸೆರೆಯಾಗಿದೆ. ಇದಲ್ಲದೇ ಇತ್ತೀಚೆಗೆ ಶಿರಸಿ ಭಾಗದಲ್ಲಿ ಚಿರತೆಗಳು ಮನೆಗಳಿಗೆ ಬರುತಿದ್ದು, ಮನೆಯ ಸಾಕುಪ್ರಾಣಿಗಳನ್ನು ಭೇಟೆಯಾಡಿ ಎಳೆದೊಯ್ಯುತ್ತಿದೆ. ಶಿರಗಣಿ ಸುತ್ತಮುತ್ತ ಚಿರತೆ ಓಡಾಡುತಿದ್ದು ಸುತ್ತಮುತ್ತಲ ಜನರಿಗೆ ಭಯ ಹುಟ್ಟುವಂತಾಗಿದೆ.

ಶಿರಗುಣಿ ಮಾತ್ರವಲ್ಲದೇ ಗೋಪಿನಾಥಪುರ, ಮತ್ತಿಘಟ್ಟಾ ಸೇರಿದಂತೆ ಅನೇಕ ಭಾಗದಲ್ಲಿ ಚಿರತೆ ಓಡಾಟ ಹೆಚ್ಚಿದೆ. ರಾತ್ರಿಯ ವೇಳೆ ಅರಣ್ಯ ಪ್ರದೇಶ ದಾಟಿ ಮನೆಗಳಿಗೆ ಹೋಗಲು ಹೆದರುವ ಸ್ಥಿತಿ ಉಂಟಾಗಿದ್ದು, ಅರಣ್ಯ ಇಲಾಖೆ ಎಚ್ಚರ ವಹಿಸುವ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಗಿದೆ.

ಇದೇ ತರಹ ಹಾವೇರಿಯ ರಾಣೆಬೆನ್ನೂರಿನ ನಿವಾಸಿಯೊಬ್ಬರು ಮನೆಯ ಶೌಚಾಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಸತತ ಕಾರ್ಯಾಚರಣೆ ಮೂಲಕ ಅದನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಹಾವೇರಿ: ಮನೆಯ ಶೌಚಾಲಯದಲ್ಲಿ ಪ್ರತ್ಯಕ್ಷವಾದ ಚಿರತೆ ಕೊನೆಗೂ ಸೆರೆ