ಮೈಸೂರು: ವಯನಾಡು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ತಾರಕ ಜಲಾಶಯವು ಈ ವರ್ಷ ಎರಡನೇ ಬಾರಿಗೆ ಭರ್ತಿಯಾಗುತ್ತಿದೆ. ಹೀಗಾಗಿ, ನದಿ ಪಾತ್ರದ ಜನರಿಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.

ತಾರಕ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಗರಿಷ್ಠಮಟ್ಟ ತಲುಪುವ ಹಂತದಲ್ಲಿದೆ. ಆದ್ದರಿಂದ ಜಲಾಶಯದಿಂದ ಯಾವುದೇ ಸಮಯದಲ್ಲಿ ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರನ್ನು ಹೊರಬಿಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು, ನದಿ ದಂಡೆಯ ಗ್ರಾಮಗಳ ನಿವಾಸಿಗಳು ಹಾಗೂ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಇರುವ ಆಸ್ತಿಪಾಸ್ತಿ, ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಜಲಾವೃತಗೊಂಡಿದ್ದ ರಸ್ತೆಗಳು: ಈ ಹಿಂದೆ ಜುಲೈ ತಿಂಗಳಿನಲ್ಲಿ ತಾರಕ ಜಲಾಶಯದಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗಿತ್ತು. ಆಗ, ಹೆಚ್.ಡಿ.ಕೋಟೆ ತಾಲೂಕಿನ ಹಲವು ರಸ್ತೆಗಳು ಜಲಾವೃತಗೊಂಡು ಜನರು ಅಕ್ಕಪಕ್ಕದ ಗ್ರಾಮಗಳಿಗೆ ತೆರಳಲು ಪರದಾಡಿದ್ದರು. ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು. ಕಟ್ಟೆಮನುಗನಹಳ್ಳಿ ಸೇತುವೆ ಮುಳುಗಿತ್ತು.

ಇದನ್ನೂ ಓದಿ: ಮಂಗಳೂರು: ಘಾಟಿ ರೈಲು ಮಾರ್ಗ ಪ್ರದೇಶದಲ್ಲಿ ಭೂಕುಸಿತ, ಈ ರೈಲುಗಳ ಮಾರ್ಗ ತುರ್ತು ಬದಲಾವಣೆ