ಮಲ್ಕಂಗಿರಿ(ಒಡಿಶಾ): ರಸ್ತೆ ಸೌಲಭ್ಯದ ಕೊರತೆಯಿಂದಾಗಿ ರೋಗಿಯನ್ನು ಆರೋಗ್ಯ ಮೇಲ್ವಿಚಾರಕರು ಸೇರಿದಂತೆ ಇಬ್ಬರು ಜೋಳಿಗೆಯಲ್ಲಿ ಕೂರಿಸಿ 5 ಕಿ.ಮೀ ಹೊತ್ತು ಸಾಗಿಸಿ ಆಂಬ್ಯುಲೆನ್ಸ್ಗೆ ಇರುವ ಸ್ಥಳಕ್ಕೆ ತಲುಪಿಸಿದ್ದಾರೆ. ಈ ಘಟನೆ ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಮಥಿಲಿ ಬ್ಲಾಕ್‌ನ ತುಳಸಿ ಗ್ರಾಮದಲ್ಲಿ ನಡೆಯಿತು.

ಹರೇಕೃಷ್ಣ ಪಾಟಿಕಾ ಎಂಬವರು ರೋಗಿಯ ಜೀವ ಉಳಿಸಲು ನೆರವಾದ ಆರೋಗ್ಯ ಮೇಲ್ವಿಚಾರಕ. ತುಳಸಿ ಗ್ರಾಮದ ಮಂಗಳದೀ ದುರುವಾ ಎಂಬ ಮಹಿಳೆಯ ಆರೋಗ್ಯ ಹದಗೆಟ್ಟಿತ್ತು. ಭಾರೀ ಮಳೆಯಿಂದಾಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, ಆಸ್ಪತ್ರೆಗೆ ತೆರಳದೇ ದಾರಿಯೂ ಇರಲಿಲ್ಲ. ಕುಟುಂಬಸ್ಥರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದರು. ಮಳೆಯಿಂದ ರಸ್ತೆ ಹದಗೆಟ್ಟಿದ್ದರಿಂದ ಆಂಬ್ಯುಲೆನ್ಸ್ ಗ್ರಾಮ ತಲುಪಲಿಲ್ಲ.

ಕೊನೆಗೆ ಗ್ರಾಮಸ್ಥರು ರೋಗಿ ಮಂಗಲ್ದೇಯ್ ಅವರನ್ನು ಜೋಳಿಗೆಯಲ್ಲೇ ಕರೆತರಬೇಕಾಯಿತು. ಇದಕ್ಕೆ ಆರೋಗ್ಯ ಮೇಲ್ವಿಚಾರಕ ಹರೇಕೃಷ್ಣ ಪಾಟಿಕಾ ಅವರೂ ಕೂಡಾ ಹೆಗಲು ಕೊಟ್ಟರು. ಆಂಬ್ಯುಲೆನ್ಸ್‌ವರೆಗೂ ಕೆಸರುಮಯ ರಸ್ತೆಯಲ್ಲಿಯೇ ರೋಗಿಯನ್ನು ಹೊತ್ತು ತರಬೇಕಾಯಿತು. ಆ ಬಳಿಕ ಸಲೀಮಿ ಎಂಬ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕಳೆದ ಹಲವು ದಿನಗಳಿಂದ ಮಂಗಳದೀ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪತಿ ಸರದು ದುರುವಾ ಆಂಬ್ಯುಲೆನ್ಸ್ಗೆ ಕರೆ ಮಾಡಿ ಪರಿಸ್ಥಿತಿ ಬಗ್ಗೆ ತಿಳಿಸಿದ್ದರು. ಕರೆ ಬಂದ ತಕ್ಷಣ ಆಂಬ್ಯುಲೆನ್ಸ್ ಸಹಿತ ನಾವು ಗ್ರಾಮಕ್ಕೆ ಬಂದೆವು. ಆದರೆ, ಮಳೆಯಿಂದ ವಾಹನ ಮುಂದೆ ಹೋಗದಂತಾಗಿತ್ತು. ಹಾಗಾಗಿ ಗ್ರಾಮದಿಂದ 5 ಕಿ.ಮೀ ದೂರವೇ ನಿಲ್ಲಿಸಬೇಕಾಯಿತು. ಮನೆಯಿಂದ ರೋಗಿಯನ್ನು ಆಕೆಯ ಸಂಬಂಧಿಕರ ಕೆಸರು ಗದ್ದೆಯಲ್ಲಿಯೇ ಹೊತ್ತುಕೊಂಡು ಬರಬೇಕಾಯಿತು ಎಂದು ಹರೇಕೃಷ್ಣ ಪಾಟಿಕಾ ಹೇಳಿದರು.

ಇದನ್ನೂ ಓದಿ: ಮನೆ ಮೇಲೆ ಬಿದ್ದ ಮರ: ಗಾಯಗೊಂಡ ವೃದ್ಧೆಯನ್ನ ಜೋಳಿಗೆ ಮೂಲಕ ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು