ಮೈಸೂರು : ದಸರಾ ಮಹೋತ್ಸವ ಅರ್ಥಪೂರ್ಣವಾಗಿ ಆಗಬೇಕು, ಯುವ ದಸರಾ ದೊಂಬಿ ಆಗಬಾರದು, ಸರ್ಕಾರ, ಪಕ್ಷದ ದಸರಾವಾಗದೇ, ಸರ್ವಜನಾಂಗದ ದಸರಾ ಆಗಬೇಕು ಎಂದು ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೋಮವಾರ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ದಸರಾ ಉದ್ಘಾಟನೆ ಮಾಡುತ್ತಿರುವುದು ಓರ್ವ ಮಹಿಳೆ, ಈ ಕಾರಣಕ್ಕೆ ಸುಮಾರು ಒಂದೂವರೆ ತಿಂಗಳಿಂದ ದಾಳಿ ಮಾಡುತ್ತಿದ್ದಾರೆ, ಹಿಂಸೆ, ದಬ್ಬಾಳಿಕೆ ನಡೆಯುತ್ತಿದೆ. ಅವರೇ ಉದ್ಘಾಟನೆ ಮಾಡಲಿ, ಅವರು ದಸರಾ ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕನ್ನಡದ ಬಾವುಟದ ಬಗ್ಗೆ ಅವರಿಗೆ ಖಂಡಿತವಾಗಿಯೂ ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಕನ್ನಡ ಬಾವುಟಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿ, ಆರ್ಎಸ್ಎಸ್ನವರು ಹೇಳುತ್ತಾರೆ. ಬಿಜೆಪಿ, ಆರ್ಎಸ್ಎಸ್ನವರು ಯಾವತ್ತಾದರೂ ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರಾ? ಜೈಲಿಗೆ ಹೋಗಿದ್ದಾರಾ? ಇಡೀ ರಾಜ್ಯದಲ್ಲಿ ಹಿಂದಿ ಬೇಡವೇ ಬೇಡ ಎಂದು ಮಾತನಾಡಲಿ. ಇವರೇನು ಕನ್ನಡವನ್ನು ಉದ್ದಾರ ಮಾಡುತ್ತಾರಾ ಎಂದು ಕಿಡಿಕಾರಿದರು.

ಓರ್ವ ಮಹಿಳೆಯರು ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ನನಗೆ ನೋವಾಗುತ್ತದೆ. ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಇದನ್ನೂ ಓದಿ : ಬಾನು ಮುಷ್ತಾಕ್ ಮುಸ್ಲಿಂ ಅಂತ ದಸರಾ ಉದ್ಘಾಟನೆಗೆ ವಿರೋಧ ಮಾಡುತ್ತಿಲ್ಲ: ಪ್ರತಾಪ್ ಸಿಂಹ