ದಾವಣಗೆರೆ: ಕುಡಿದು ಬಿಸಾಡಿದ್ದ ಬಿಯರ್ ಟಿನ್ ಬಾಟಲ್ ಒಳಗೆ ತಲೆ ಸಿಕ್ಕಿಸಿಕೊಂಡು ಪರದಾಡುತ್ತಿದ್ದ ಹಾವನ್ನು ಯುವಕರು ರಕ್ಷಣೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಸ್ತೆಯೊಂದರಲ್ಲಿ ತಲೆಗೆ ಬಿಯರ್ ಟಿನ್ ಬಾಟಲ್ ಸಿಲುಕಿಸಿಕೊಂಡು ಹೊರ ಬರಲಾಗದೇ ಹಾವು ಪರದಾಡುತ್ತಿತ್ತು. ಇದನ್ನು ಗಮನಿಸಿದ ನಲ್ಕುದುರೆ ಗ್ರಾಮದ ಯುವಕರು, ಕಟ್ಟಿಗೆ ಸಹಾಯದಿಂದ ಬಾಟಲ್ನಿಂದ ಹಾವಿನ ತಲೆ ಹೊರಬರುವಂತೆ ಮಾಡಿ ರಕ್ಷಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಮದ್ಯ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಪ್ರಾಣಿ - ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕಸದ ತೊಟ್ಟಿಗಳಿಗೆ ಹಾಕಿ ಎಂದು ಯುವಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಯುವಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹಾವು ರಕ್ಷಿಸಲು ಕುಡಗೋಲು ಸಹಕಾರಿ: ಕಬ್ಬಿಣ ಮಿಶ್ರಿತ ತಗಡಿನಿಂದ ಮಾಡಲ್ಪಟ್ಟ ಟಿನ್ ಬಿಯರ್ ಬಾಟಲ್ನಲ್ಲಿ ಹಾವು ತನ್ನ ತಲೆಯ ಭಾಗವನ್ನು ಸಿಲುಕಿಸಿಕೊಂಡಿತ್ತು. ಆಹಾರ ಅರಸಿ ಬಂದ ಹಾವು ಪಡಿಪಾಟಲು ಪಟ್ಟಿತ್ತು. ಇದನ್ನು ಕಂಡ ಇಬ್ಬರು ಯುವಕರು ಕುಡುಗೋಲಿನ ಸಹಕಾರದಿಂದ ತಗಡಿನ ಟಿನ್ ಬಾಟಲ್ ಮುರಿದು ಹಾವು ಹೊರಬರುವಂತೆ ಮಾಡಿದ್ದಾರೆ. ಅಬ್ಬಾ ಬಿಡುಗಡೆಯಾದೆ ಎಂದು ಹಾವು ಸರಸರನೇ ಪೊದೆ ಸೇರಿದೆ.

ಇದನ್ನೂ ಓದಿ: ಕೊಪ್ಪಳ: ಬರಿಗೈಯಲ್ಲಿ ಹೆಬ್ಬಾವು ಹಿಡಿದು ರಕ್ಷಿಸಿದ ಯುವಕ- ವಿಡಿಯೋ ವೈರಲ್ - PYTHON RESCUE VIDEO