ಚಾಮರಾಜನಗರ: ಹನೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ಶಾಗ್ಯ ಗ್ರಾಮಸ್ಥರು ರಾಗಿ ಅಂಬಲಿ ಹಂಚಿ ಹುಳ್ಳಿ ವಿತರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶಾಗ್ಯದ ಎಲ್ಲ ಸಮುದಾಯದವರು ಒಟ್ಟಾಗಿ ಸೇರಿ ಚಿಕ್ಕ ಮಕ್ಕಳಿಗೆ ಸೊಂಟದ ಸುತ್ತಲೂ ಸೊಪ್ಪು ಕಟ್ಟಿ, ತಲೆಯ ಮೇಲೆ ಒನಕೆ, ಬಸವ, ಕಪ್ಪೆಯನ್ನು ಕಟ್ಟಿ ಪ್ರತಿ ಮನೆಯಲ್ಲಿಯೂ ನೀರು ಹಾಕಿಸಿಕೊಳ್ಳುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು.

ವಿಶೇಷವಾಗಿ ಮಹದೇವಸ್ವಾಮಿ ಎಂಬವರು ರೈತನ ಪಾತ್ರ ಧರಿಸಿ ಹೆಗಲ ಮೇಲೆ ನೇಗಿಲು ಹೊತ್ತು, ಪ್ರಕಾಶ್ ಮೂರ್ತಿ ಅಲಿಯಾಸ್ ದೀಪು ಎಂಬವರು ಹೆಂಗಸಿನ ಪಾತ್ರಧಾರಿಯಾಗಿ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಎಂದು ಕೂಗೂತ್ತಾ ರಾಗಿ ಅಂಬಲಿ, ಹುರುಳಿ ಹಂಚಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೃತ್ಯ ಮಾಡಿದರು.

ಮೆರವಣಿಗೆಯಲ್ಲಿ ಬಸವ ಕತ್ತೆಯನ್ನು ಜೊತೆಯಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಗ್ರಾಮದ ಎಲ್ಲಾ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ರಾಗಿ ಅಂಬಲಿ ಹಾಗೂ ಹುರುಳಿ ವಿತರಿಸಿದರು. ನಂತರ ಗ್ರಾಮದ ಕೆರೆಯಲ್ಲಿ ನೇಗಿಲು, ಬಸವ, ಕತ್ತೆಗೆ ಪೂಜೆ ಸಲ್ಲಿಸಿದ ನಂತರ ರಾಗಿ ಕಾಯಿಸಿದ ಅಂಬಲಿಯ ಮಡಿಕೆಯನ್ನು ಕೆರೆಯಲ್ಲಿ ಒಡೆದು ಹಾಕಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ ಆಗಿದ್ದಾರೆ.

ಮೆರವಣಿಗೆಯಲ್ಲಿ ಲಿಂಗಾಯತ, ನಾಯಕ, ಆದಿಜಾಂಬವ ಸಮುದಾಯದವರು ಸೇರಿದಂತೆ ಎಲ್ಲಾ ಸಮುದಾಯದ ಗ್ರಾಮಸ್ಥರು, ಮಕ್ಕಳು ಯಾವುದೇ ಜಾತಿ ಭೇದವಿಲ್ಲದೆ ಒಂದಾಗಿ ಮೆರವಣಿಗೆ ನಡೆಸಿ, ಮಳೆಗಾಗಿ ದೇವರ ಮೊರೆ ಹೋದರು.

ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರೆದ ಮಳೆ: ಏಳು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ