ದಾವಣಗೆರೆ: ಕಾಡು ಹಂದಿಗಳ ಉಪಟಳ ತಡೆಯಲು ಜಮೀನಿನಲ್ಲಿ ಹಾಕಿದ್ದ ಬಲೆಯಲ್ಲಿ ಚಿರತೆ ಮರಿಯೊಂದು ಸಿಕ್ಕಿಹಾಕಿಕೊಂಡು, ಒದ್ದಾಡಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದ ಪಕ್ಕದಲ್ಲಿರುವ ಜಮೀನಿನಲ್ಲಿ ನಡೆದಿದೆ.

ರಾತ್ರಿ ವೇಳೆ ಮರಿಚಿರತೆ ಬಲೆಯಲ್ಲಿ ಸಿಲುಕಿಕೊಂಡಿದೆ. ಇದನ್ನು ಕಂಡ ರೈತರು ಗಾಬರಿಯಿಂದ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಈ ವೇಳೆ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಚಿರತೆ ಹೊರಬರಲು ಒದ್ದಾಡಿದ್ದು, ಸ್ಥಳೀಯರು ವಿಡಿಯೋ ಸೆರೆ ಹಿಡಿದಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.

ಇಲ್ಲಿ ಕಾಡು ಹಂದಿಗಳು ಮೆಕ್ಕೆಜೋಳ ಜಮೀನಿಗೆ ಲಗ್ಗೆ ಇಟ್ಟು ಇಡೀ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಇದರಿಂದ ರೋಸಿಹೋಗಿದ್ದ ರೈತರು ಹಂದಿಗಳಿಗೆ ಕಡಿವಾಣ ಹಾಕಲೆಂದು ಜಮೀನಿನಲ್ಲಿ ಬಲೆ ಹಾಕಿದ್ದರು. ಆದರೆ ಆ ಬಲೆಯಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿದೆ. ಒಂದೆಡೆ ಹಂದಿಗಳ ಕಾಟವಾದರೆ, ಇತ್ತ ಬಸವಾಪಟ್ಟಣ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ.

ಈ ಚಿರತೆ, ಹಂದಿ ಹಾವಳಿಯಿಂದ ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ರಾತ್ರಿ ಹೊತ್ತು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಚಿರತೆ, ಕಾಡು ಹಂದಿಗಳಿಗೆ ಉಪಟಳದಿಂದ ಮುಕ್ತಿ ನೀಡುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: VIDEO: ಕಾರವಾರದಲ್ಲಿ ಕಾಳಿಂಗ ಸರ್ಪ, ಶಿರಸಿಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ