ಶಿವಮೊಗ್ಗ: "ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಾಂಗ್ರೆಸ್ ಹೋರಾಟ ಮಾಡುತ್ತಿದೆ" ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.

ಇಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಅಶೋಕ ವೃತ್ತದಲ್ಲಿ ನಡೆದ ಮತಗಳ್ಳತನ ವಿರುದ್ಧ ಬೃಹತ್ ಸಹಿ ಸಂಗ್ರಹ ಅಭಿಯಾನ ಉದ್ಘಾಟಿಸಿದ ನಂತರ ಮಾಧ್ಯಮದವರ ಜೊತೆ ಅವರು ಜೊತೆ ಮಾತನಾಡಿದರು.

"ಸ್ವಾತಂತ್ರ ಬಂದ ಮೇಲೆ ಸ್ವತಂತ್ರವಾಗಿ ಮತ ಹಾಕುವ ಹಕ್ಕನ್ನು ಕಾಂಗ್ರೆಸ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿದ್ದಾರೆ. ಅದನ್ನು ಹಾಳು ಮಾಡುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ" ಎಂದು ಟೀಕಿಸಿದರು.

"ರಾಹುಲ್ ಗಾಂಧಿ ಅವರು ವಿರೋಧ ಪಕ್ಷದವರಾಗಿ, ಸರ್ಕಾರದಲ್ಲಿ ಏನಾದರೂ ನಡೆದರೆ, ಅದನ್ನು ಪ್ರಶ್ನಿಸುವ ಅಧಿಕಾರ ಹೊಂದಿದ್ದಾರೆ. ಆದರೆ, ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಬೇಜಬ್ದಾರಿತನದಿಂದ ಉತ್ತರ ಕೊಡುವುದು ಸರಿಯಲ್ಲ. ಚುನಾವಣಾ ಆಯೋಗ ಎಷ್ಟು ಬೇಜವಾಬ್ದಾರಿತನ ಹೊಂದಿದೆ ಎಂದು ಗೊತ್ತಾಗುತ್ತಿದೆ" ಎಂದರು.

"ಬಿಜೆಪಿಯವರು ಮೋಸ ಮಾಡುತ್ತಿದ್ದಾರೆ. ನಮ್ಮಿಂದ ತೆರಿಗೆ ಪಡೆದು ಅದರ ಪಾಲನ್ನು ನಮಗೆ ಕೊಡುವುದೇ ಇಲ್ಲ. ನಮ್ಮ ಗ್ಯಾರಂಟಿಯನ್ನು ಕದ್ದು ಚುನಾವಣೆಯಲ್ಲಿ ಗೆದ್ದ ನಂತರ ಅದನ್ನು ಜಾರಿ ಮಾಡುವುದಿಲ್ಲ. ಜಿಎಸ್ಟಿ ಕಡಿತ ಮಾಡಿದ್ದಾರೆ. ಜಿಎಸ್ಟಿಯನ್ನು ಮೊದಲು ಜಾರಿಗೆ ತಂದಿದ್ದು ಕಾಂಗ್ರೆಸ್. ಅದನ್ನು ವಿರೋಧಿಸಿದ ಇದೇ ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಕ್ಕೆ ತಂದರು" ಎಂದು ಹೇಳಿದರು.

ಇದನ್ನೂ ಓದಿ: ಪರಿಶಿಷ್ಟ ಜಾತಿಯಲ್ಲಿ ಕ್ರಿಶ್ಚಿಯನ್ ಟ್ಯಾಗ್ ಕೈಬಿಡಿ, ಕ್ರಿಶ್ಚಿಯನ್ ಅಂತ ಬರೆದರೆ ಮೀಸಲಾತಿ ಸಿಗುವುದಿಲ್ಲ: ಛಲವಾದಿ ನಾರಾಯಣಸ್ವಾಮಿ