ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಂಗೀತಪ್ರೇಮಿಗಳಿಗೆ ಹಾಗೂ ಸಾರ್ವಜನಿಕ ಹೃದಯಕ್ಕೆ ನೌಕಾಪಡೆಯ ಬ್ಯಾಂಡ್ ಮ್ಯೂಸಿಕ್ ಮುದ ನೀಡಿತು. ಕರ್ನಾಟಕ ವಸ್ತು ಪ್ರದರ್ಶನದಲ್ಲಿ ಬುಧವಾರ ಆಯೋಜಿಸಿದ್ದ ಕಾರವಾರದ ಐಎನ್ಎಸ್ ಕದಂಬ ಲೆಫ್ಟಿನೆಂಟ್ ಕಮಾಂಡರ್ ಮೈಯೂರ್, ನೇವಿ ಬ್ಯಾಂಡ್ ತಂಡದ ಮುಖ್ಯಸ್ಥ ರೋಷನ್ ಥಾಪ ಅವರು ತಂಡವನ್ನು ಮುನ್ನಡೆಸುತ್ತಾ, ಸುಶ್ರಾವ್ಯವಾಗಿ ಸಂಗೀತ ನುಡಿಸಿದರು. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ನೌಕಾಪಡೆ ಸಂಗೀತ ಸುಧೆ ಉಣಬಡಿಸಿತು.

ಮಹೋತ್ಸವ ಅಂಗವಾಗಿ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗಾನ ವೈಭವ ಶೀರ್ಷಿಕೆಯಡಿಯಲ್ಲಿ ಅತ್ಯುತ್ತಮ ನಟಿ, ರಂಗಭೂಮಿ ಕಲಾವಿದೆ ಹಾಗೂ ಪ್ರಸಿದ್ಧ ಗಾಯಕಿ ಅನನ್ಯ ಭಟ್ ಹಾಗೂ ಅವರ ತಂಡದವರಿಂದ ಆಯ್ದ ಜಾನಪದ ಗಾನಸುಧೆ ಹರಿಸುವ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿದರು.

ಮೈಸೂರು ರಾಜ್ಯದ ದೊರೆಯೇ... ರಣಧೀರ ನಾಯಕನೇ... ನಿನ್ನಂತವನ್ಯಾರೂ ಇಲ್ವಲ್ಲೋ... ಲೋಕದ ದೊರೆ... ಎಂಬ ಹಾಡಿಗೆ ನೆರೆದಿದ್ದ ಪ್ರೇಕ್ಷಕರು ಮನಸೋತು ನಿಂತ ನಿಂತಲ್ಲೇ ಕುಣಿದು ಕುಪ್ಪಳಿಸಿದರೆ, ಮೈಸೂರಿನಲ್ಲೇ ಚಿತ್ರೀಕರಣಗೊಂಡಿರುವ ಕನ್ನಡ ನಾಡು ನುಡಿ ಕುರಿತು ಬರೆದಿರುವ ಬಾರಿಸು ಕನ್ನಡ ಡಿಂಡಿಮವ... ಓ ಕರ್ನಾಟಕ ಹೃದಯ ಶಿವಾ... ಹಾಡು ನೆರೆದಿದ್ದವರನ್ನು ಮೋಡಿ ಮಾಡಿತು.

ಮತ್ತೊಂದೆಡೆ, ನಗರದ ಹೊರವಲಯದ ಉತ್ತನಹಳ್ಳಿ ಬಳಿ ಆಯೋಜಿಸಿಲಾಗಿದ್ದ ಯುವ ದಸರಾ ವೇದಿಕೆಯಲ್ಲಿ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಗಾಯಕ ಪ್ರೀತಮ್ ಚಕ್ರವರ್ತಿ ಗಾನಸುಧೆಗೆ ಮೈಸೂರು ಜನತೆ ಫಿದಾ ಆಗಿ ಕುಣಿದು ಕುಪ್ಪಳಿಸಿದರು. ಪ್ರೀತಮ್ ಬರುತ್ತಿದ್ದಂತೆ ಯುವ ಸಮೂಹ ಶಿಳ್ಳೆ ಚಪ್ಪಾಳೆ ಮೂಲಕ ನೆಚ್ಚಿನ ಗಾಯಕನನ್ನು ಬರಮಾಡಿಕೊಂಡರು.

ಯುವ ಸಮೂಹದ ಹರ್ಷ ನೋಡಿದ ಗಾಯಕ ಪ್ರೀತಮ್ ಹೇ ದಿಲ್ ಹೇ ಮುಸ್ಕಿಲ, ಥೂ ಮೇರಿ ಸನಮ್, ಥುಮ್ ಜೋ ಆಯೆ, ಅಭಿ ಕುಚ್ ಡೇನೆ, ಹಲ್ಕಾ ಹಲ್ಕಾ ಹೇ ಸಮಾ, ಬಿನ್ ತೇರಿ ಸೇರಿದಂತೆ ತಮ್ಮ ಹಲವು ಹಿಂದಿ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದಲ್ಲದೆ ಕನ್ನಡದ ಸುದೀಪ್ ನಟನೆಯ ಎಕ್ಕ ಸಕ್ಕ ಎಕ್ಕ ಸಕ್ಕ ಹಾಡು ಹಾಡುತ್ತಿದ್ದಂತೆ ಇಡೀ ಪ್ರೇಕ್ಷಕರು ಎದ್ದು ಡ್ಯಾನ್ಸ್ ಮಾಡಿದರು.

ಇದನ್ನೂ ಓದಿ: ಮಂಗಳೂರು: ಒಂದೇ ಸೂರಿನಡಿ ನವದುರ್ಗೆಯರ ಪ್ರತಿಷ್ಠಾಪನೆ, ಇದೊಂದು ಹೊಸ ಕಲ್ಪನೆ; Photoಗಳಿವೆ ನೋಡಿ