ಮೈಸೂರು: ಸೆ. 26ರಿಂದ 30ರ ವರೆಗೆ 5 ದಿನಗಳ ಕಾಲ ಕೆಆರ್ಎಸ್ನಲ್ಲಿ ಸಾಂಕೇತಿಕವಾಗಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಪರಿಶೀಲನೆ ಬಳಿಕ ಅಧಿಕಾರಿಗಳಿಗೆ ಕಾರ್ಯಕ್ರಮವನ್ನು ಯಾವುದೇ ಲೋಪವಿಲ್ಲದೆ ನಡೆಸಲು ಸೂಚನೆ ನೀಡಿದರು. ಬೆಂಗಳೂರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆಯುಕ್ತ ರಾಮ್ ಪ್ರಸಾದ್ ಮನೋಹರ್ ಅವರು ಕಾವೇರಿ ಆರತಿಯ ರೂಪುರೇಷೆ ಕುರಿತು ವಿವರಿಸಿದರು.

ಪರಿಶೀಲನೆ ವೇಳೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ವಿಧಾನಸಭಾ ಶಾಸಕ ಪಿ. ರವಿಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರಾಮ್ ಪ್ರಸಾದ್ ಮನೋಹರ್ ಇದ್ದರು.

ಪರಿಶೀಲನೆಗೂ ಮುನ್ನ ಕಾವೇರಿ ಆರತಿಗೆ ರೈತರಿಂದ ವಿರೋಧ ಕೇಳಿ ಬರುತ್ತಿರುವ ಬಗ್ಗೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ರೈತರ ವಿರೋಧ ಇದೆ ಅಂತ ಯಾರು ಹೇಳಿದರು? ಪೂಜೆ ಮಾಡಲು ಯಾರಾದರೂ ವಿರೋಧ ಮಾಡುತ್ತಾರಾ? ನೀವು ವಿರೋಧ ಮಾಡಬಹುದಷ್ಟೇ. ರೈತರ ಒಳಿತಿಗಾಗಿ ಕಾವೇರಿ ಮಾತೆಯನ್ನು ಪೂಜಿಸಿ, ಪ್ರಾರ್ಥಿಸುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ರೈತರ ವಿರೋಧವಿಲ್ಲ. ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಿದ್ದೇನೆ. ನಾವು ದೊಡ್ಡದಾಗಿ ಮಾಡಬೇಕೆಂದುಕೊಂಡಿದ್ದ ಜಾಗದಲ್ಲಿ ಈ ಕಾರ್ಯಕ್ರಮ ಮಾಡುತ್ತಿಲ್ಲ ಎಂದರು.

ಇದನ್ನೂ ಓದಿ: 'ಸೆ.26ರಿಂದ 30ರವರೆಗೆ KRSನಲ್ಲಿ ಸಾಂಕೇತಿಕವಾಗಿ ಕಾವೇರಿ ಆರತಿ'