ಜೈಪುರ (ರಾಜಸ್ಥಾನ) : ಜಿಲ್ಲೆಯ ದುಡು ಪ್ರದೇಶದ ರಾಷ್ಟ್ರೀಯ ಹೆದ್ದಾರಿ 48ರ ನೈರಾ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಮುಂಜಾನೆ ಟ್ರಕ್ ಮತ್ತು ಟ್ರೇಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ನಂತರ ಟ್ರೇಲರ್ ರಸ್ತೆಗೆ ಉರುಳಿಬಿದ್ದಿದ್ದು, ಎರಡೂ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅವಘಡದಿಂದಾಗಿ ಚಾಲಕರೊಬ್ಬರು ಸಜೀವ ದಹನವಾಗಿದ್ದು, ಟ್ರಕ್ನಲ್ಲಿದ್ದ ಇತರ ಇಬ್ಬರಿಗೆ ಸುಟ್ಟಗಾಯಗಳಾಗಿವೆ.

ದಾರಿಹೋಕರು ಟ್ರಕ್‌ನಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿ ದುಡು ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ದುಡು ಪೊಲೀಸರು ಸ್ಥಳಕ್ಕೆ ಆಗಮಿಸಿ ನೀರಿನ ಟ್ಯಾಂಕರ್‌ಗಳ ಸಹಾಯದಿಂದ ಬೆಂಕಿಯನ್ನು ನಂದಿಸಿದ್ದಾರೆ.

ಈ ಅವಘಡದಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ದೀರ್ಘ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಹಾನಿಗೊಳಗಾದ ವಾಹನಗಳನ್ನು ಪಕ್ಕಕ್ಕೆ ಸ್ಥಳಾಂತರಿಸುವ ಮೂಲಕ ಪೊಲೀಸರು ಸಂಚಾರ ದಟ್ಟಣೆಯನ್ನು ತೆರವುಗೊಳಿಸಿದ್ದಾರೆ.

ಈ ಕುರಿತು ದುಡು ಪೊಲೀಸ್ ಠಾಣಾಧಿಕಾರಿ ಮುಖೇಶ್ ಕುಮಾರ್ ಅವರು ಮಾತನಾಡಿದ್ದು, 'ಜೈಪುರದಿಂದ ಅಜ್ಮೀರ್‌ಗೆ ತೆರಳುತ್ತಿದ್ದ ಬಿಸ್ಕತ್ತು ತುಂಬಿದ್ದ ಟ್ರಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ದಾಟಿ ಟೈಲ್ಸ್ ತುಂಬಿದ್ದ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ' ಎಂದು ತಿಳಿಸಿದ್ದಾರೆ.

ಪೊಲೀಸರು ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಿದ್ದಾರೆ. ಪ್ರಸ್ತುತ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಮೃತರ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : ದೇಶದ ಹಲವು ಕಡೆ ಭೀಕರ ಅಪಘಾತ; 11 ಸಾವು, ಹಲವು ಮಂದಿಗೆ ಗಾಯ