ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವಿಜಯದಶಮಿ ಹಿನ್ನೆಲೆ ಅದ್ಧೂರಿಯಾಗಿ ಜಂಬೂ ಸವಾರಿ ಮೆರವಣಿಗೆ ನಡೆದಿದೆ. ನಗರದ ಶಿವಪ್ಪನಾಯಕ ಅರಮನೆ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪನವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ನಂತರ ಕೋಟೆ ಶ್ರೀ ಆಂಜನೇಯ ದೇವಾಲಯದ ಮುಂಭಾಗ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಡೆಸಲಾಯಿತು. ಅಲ್ಲಿಂದ ಜಂಬೂ ಸವಾರಿ ಮುಂದೆ ಸಾಗಿತು.

ಮೆರವಣಿಗೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಆಯುಕ್ತರಾದ ಮಾಯಣ್ಣ ಗೌಡ, ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನ ಪಟಗಾರ ಅವರು ಪಾಲ್ಗೊಂಡರು. ಮೆರವಣಿಗೆಯಲ್ಲಿ ಅಂಬುಛೇಧನ ಮಾಡುವ ಶಿವಮೊಗ್ಗದ ತಹಶೀಲ್ದಾರ್ ರಾಜೀವ್ ಅವರು ಕೂಡ ಭಾಗಿಯಾಗಿದ್ದರು. ಮಲೆನಾಡ ಜನತೆ ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು.

ಮೂರು ಆನೆಗಳು ಭಾಗಿ: 650 ಕೆ.ಜಿ ಬೆಳ್ಳಿಯ ಅಂಬಾರಿಯನ್ನು ಸಕ್ರೆಬೈಲಿನ ಸಾಗರ ಆನೆ ಹೊತ್ತು ಸಾಗಿದನು. ಈತನಿಗೆ 2 ಕುಮ್ಕಿ ಆನೆ ಮೆರವಣಿಗೆಯುದ್ದಕ್ಕೂ ಸಾಥ್ ನೀಡಿದವು. ಈ ಬಾರಿ ಕೂಡ ಈ ಬಾರಿಯೂ ಹೆಣ್ಣಾನೆ ಇಲ್ಲದೇ, ಗಂಡಾನೆಗಳೊಂದಿಗೆ ಶಿವಮೊಗ್ಗ ಜಂಬೂ ಸವಾರಿ ಮೆರವಣಿಗೆ ನಡೆದಿದೆ.

ಇದನ್ನೂ ಓದಿ: ತುಮಕೂರು ದಸರಾ ಮಹೋತ್ಸವ: ವೈಭವಯುತ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಡಾ. ಜಿ. ಪರಮೇಶ್ವರ್