ದಾವಣಗೆರೆ: ಕೆಂಡ ತುಳಿಯುವಾಗ ಪಲ್ಲಕ್ಕಿ ಸಮೇತ ಮುಗುಚಿ ಕೆಂಡದ ಮೇಲೆ ಭಕ್ತರು ಬಿದ್ದಿರುವ ಘಟನೆ ಶುಕ್ರವಾರ ತಡರಾತ್ರಿ ಹೊನ್ನಾಳಿ ತಾಲೂಕಿನ ನೆಲವೊನ್ನೆ ಗ್ರಾಮದಲ್ಲಿ ನಡೆದಿದ್ದು, ಭಾರೀ ದುರಂತ ತಪ್ಪಿದೆ.

ಕರೇಗೌಡ ಎಂಬ ಭಕ್ತನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಸರಾ ಹಬ್ಬದ ಮರುದಿನ ನೆಲವೊನ್ನೆ ಗ್ರಾಮದ ಕರಿಯಮ್ಮ ದೇವಿಯ ಕೆಂಡೋತ್ಸವವನ್ನು ಪ್ರತಿವರ್ಷ ಅದ್ಧೂರಿಯಾಗಿ ಹಮ್ಮಿಕೊಂಡು ಬರಲಾಗುತ್ತದೆ. ಹಾಗೇ, ನಿನ್ನೆ ಶುಕ್ರವಾರ ಕರಿಯಮ್ಮ ದೇವಿಯ ಕೆಂಡೋತ್ಸವವನ್ನು ಆಚರಿಸಲಾಯಿತು.

ಈ ವೇಳೆ ದೇವಿಯನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡ ಭಕ್ತರು ಕೆಂಡದಲ್ಲಿ ತುಳಿಯುವಾಗ ಕಾಲು ಮುಗುಚಿ ಕೆಂಡದ ಮೇಲೆ ಭಕ್ತರು ಬಿದಿದ್ದಾರೆ. ಘಟನೆಯಲ್ಲಿ ಕರೇಗೌಡ ಅಲ್ಲದೇ ಇನ್ನೂ ಮೂರ್ನಾಲ್ಕು ಭಕ್ತರಿಗೆ ಸುಟ್ಟಗಾಯಗಳಾಗಿವೆ. ಕರೇಗೌಡ ಭಕ್ತ ಪಲ್ಲಕ್ಕಿಯ ಮುಂಭಾಗದಲ್ಲಿ ಇದ್ದ ಕಾರಣ ಗಂಭೀರ ಗಾಯಗಳಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಇಂಥಹ ಘಟನೆಗಳು ಜಿಲ್ಲೆಯಲ್ಲಿ ಪ್ರತಿಬಾರಿ ನಡೆಯುತ್ತಿದ್ದು, ಜಿಲ್ಲಾಡಳಿತ ಜಾಗೃತಿ ಮೂಡಿಸಿ ತಿಳಿ ಹೇಳಿದೆ. ಆದರೆ ಗ್ರಾಮಸ್ಥರು ಮಾತ್ರ ಜಿಲ್ಲಾಡಳಿತದ ಮಾತುಗಳಿಗೆ ಸೊಪ್ಪು ಹಾಕುತ್ತಿಲ್ಲ.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ಮೂವರು ಸಾವು, ನಾಲ್ವರು ಕಣ್ಮರೆ: ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ