ಶಿವಮೊಗ್ಗ: ದೀಪಾವಳಿ ಹಬ್ಬದಲ್ಲಿ ಬೆಳಗ್ಗೆ ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಪ್ರಾರಂಭಿಸಲಾಗುತ್ತದೆ. ಆದರೆ, ಇತ್ತೀಚೆಗೆ ಗೋವು ಸಾಕಾಣಿಕೆ ಕಡಿಮೆಯಾಗಿದ್ದರಿಂದ ಶಿವಮೊಗ್ಗದ ಗೋವರ್ಧನ ಟ್ರಸ್ಟ್ ವತಿಯಿಂದ ಐದು ಕಡೆಗಳಲ್ಲಿ ಗೋವುಗಳ ಪೂಜೆಗೆ ಅವಕಾಶ ಮಾಡಿಕೊಟ್ಟಿತ್ತು.

ಟ್ರಸ್ಟ್ನ ಮಹಾ ಪೋಷಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ವಿನೋಬನಗರದ ಶಿವಾಲಯದಲ್ಲಿ ಗೋವು ಪೂಜೆಗೆ ಅವಕಾಶ ಮಾಡಿಕೊಡಲಾಗಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಮಾಜಿ ಡಿಸಿಎಂ, ಗೋವುಗಳ ಪೂಜೆಯಲ್ಲಿ ಭಾಗಿಯಾಗಿದ್ದರು.

ಯಡಿಯೂರಿನ ರಂಭಾಪುರಿ ಶಾಖಾಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋಪೂಜೆ ನೆರವೇರಿಸಲಾಯಿತು. ಸಾರ್ವಜನಿಕರು ಸಹ ಗೋವಿನ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಯಡಿಯೂರು ಗುರುಗಳು ಗೋವರ್ಧನ ಟ್ರಸ್ಟ್ಗೆ 51,000 ಸಾವಿರ ಹಣವನ್ನು ದೇಣಿಗೆ ನೀಡಿದರು.

ಗೋವು ಪೂಜೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಇಂದು ನಮ್ಮ ಒಂದು ಕಡೆ ಶಿವನಿದ್ದರೆ, ಇನ್ನೊಂದು ಕಡೆ ಸ್ವಾಮೀಜಿಗಳಿದ್ದಾರೆ. ಈ ದೇಶದಲ್ಲಿ ಎಲ್ಲಿಯವರೆಗೆ ಗೋವುಗಳಿಗೆ ರಕ್ಷಣೆ ಸಿಗುವುದಿಲ್ಲವೋ, ಎಲ್ಲಿಯವರೆಗೆ ಗುರುಗಳಿಗೆ ಗೌರವ ಸಿಗುವುದಿಲ್ಲವೋ, ಎಲ್ಲಿಯವರೆಗೆ ದೇವರ ಬಗ್ಗೆ ಗೌರವ ಬರುವುದಿಲ್ಲವೋ ಅಲ್ಲಿವರೆಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರೋದು ವ್ಯರ್ಥ. ದೀಪಾವಳಿಯಂದು ಗೋವುಗಳಿಗೆ ಪೂಜೆ ಮಾಡುವುದಷ್ಟೇ ಅಲ್ಲದೆ ಗೋವುಗಳ ರಕ್ಷಣೆಗೆ ನಾವು ಪಣ ತೊಡಬೇಕಿದೆ ಎಂದರು.

ಗೋವಿನಲ್ಲಿ ಸಕಲ ದೇವತೆಗಳು: ಗೋವಿನಲ್ಲಿ ಸಕಲ ದೇವತೆಗಳು ವಾಸವಾಗಿರುತ್ತವೆ. ಪ್ರತಿ ಮನೆಯಲ್ಲಿ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಮುಖ್ಯವಾಗಿ ಗೋವುಗಳ ಪೂಜೆ ನಡೆಸಲಾಗುತ್ತದೆ. ಸನಾತನ ಧರ್ಮದಲ್ಲಿ ಗೋವುಗಳ ಪೂಜೆ, ರಕ್ಷಣೆ, ಅದರ ಸಂತತಿಯನ್ನು ಬೆಳಗುವಂತೆ ಮಾಡಬೇಕೆಂದಿದೆ. ನಮ್ಮ ಹೆತ್ತ ತಾಯಿಯಂತೆ ಗೋ ಮಾತೆಯನ್ನೂ ರಕ್ಷಿಸಬೇಕಿದೆ ಎಂದು ಪುರೋಹಿತರಾದ ಉಮೇಶ್ ಶಾಸ್ತ್ರಿ ತಿಳಿಸಿದರು.

ಇದನ್ನೂ ಓದಿ: ಬಲಿಪಾಡ್ಯಮಿಯಂದು ಮುಜರಾಯಿ ದೇವಾಲಯಗಳಲ್ಲಿ ಗೋಪೂಜೆ ನಡೆಸಲು ಸೂಚನೆ