ಮಂಡ್ಯ: ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ 4 ವರ್ಷದ ಹೆಣ್ಣು ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲವು ದಿನಗಳಿಂದ ಸಾಕು ಪ್ರಾಣಿಗಳ ಕೊಂದು ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಬಲೆಗೆ ಬೋನಿಗೆ ಬಿದ್ದಿದೆ.

ಹಲವು ತಿಂಗಳಿಂದ ಚಿರತೆಯು ಗ್ರಾಮದಲ್ಲಿನ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿತ್ತು. ಹೀಗಾಗಿ, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಬೋನ್ ಇರಿಸಲಾಗಿತ್ತು. ರಾತ್ರಿ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆ ಅರಣ್ಯ ಸಿಬ್ಬಂದಿ ಇರಿಸಿದ್ದ ಬೋನಿನೊಳಗೆ ಬಿದ್ದಿದೆ.

ಇನ್ನು, 3-4 ಚಿರತೆಗಳು ಗ್ರಾಮದಲ್ಲಿ ಉಪಟಳ ನೀಡುತ್ತಿರುವುದರಿಂದಾಗಿ ಜನರಲ್ಲಿ ಆತಂಕ ಎದುರಾಗಿದೆ. ಬೋನಿಗೆ ಬಿದ್ದ ಚಿರತೆ ನೋಡಲು ಆಳಿಗೊಬ್ಬರಂತೆ ಜನರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜನರ ಗದ್ದಲ ಹೆಚ್ಚಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ.

ಈ ಕುರಿತು ಗ್ರಾಮಸ್ಥರಾದ ವಸಂತ ಅವರು ಮಾತನಾಡಿದ್ದು, 'ಶಾಲೆ ಬಿಟ್ಟ ನಂತರ ಮಕ್ಕಳು ನಾವಿರುವ ಜಮೀನಿನ ಬಳಿಗೆ ಬರುತ್ತಾರೆ. ಆಗ ಮಕ್ಕಳನ್ನು ಚಿರತೆ ಹೊತ್ತುಕೊಂಡು ಹೋದ್ರೆ ನಮ್ಮ ಕಥೆ ಏನು?. ಈ ಬಗ್ಗೆ ಗಮನಹರಿಸಿ ಚಿರತೆಗಳನ್ನು ಸೆರೆಹಿಡಿಯಬೇಕು. ಇನ್ನೂ ನಾಲ್ಕು ಚಿರತೆಗಳಿವೆ' ಎಂದು ಹೇಳಿದ್ದಾರೆ.

ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಅಕ್ಟೋಬರ್ 22, 2025 ರಂದು ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು. ರಾಜೇಶ್ ಎಂಬುವವರ ಇಟ್ಟಿಗೆಗೂಡಿನ ಬಳಿ ಅ. 21ರ ಮುಂಜಾನೆ 4 ಮತ್ತು 4:30ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು.