ಮೈಸೂರು: ನಿಯತ್ತಿಗೆ ಮತ್ತೊಂದು ಹೆಸರು ನಾಯಿ. ಅನ್ನ ತಿಂದ ಮನೆ ಕಾಯುವುದರೊಂದಿಗೆ ಇಲ್ಲೊಂದು ನಾಯಿ ತನ್ನ ಮಾಲೀಕನ ಪ್ರಾಣವನ್ನೂ ಕಾಪಾಡಿದೆ.

ಜಿಲ್ಲೆಯ ಕಂಪಲಾಪುರದ ಹೋಟೆಲ್ ಮಾಲೀಕರಾದ ಮಹೇಂದ್ರ ಅವರು ಭಾನುವಾರ ಕೆಲಸ ಮುಗಿಸಿ ಸಂಜೆ ನಿದ್ರೆಗೆ ಜಾರಿದ್ದರು. ತಮ್ಮ ಮನೆ ಮುಂದೆ ರಾಟ್ ವೀಲರ್ ತಳಿಯ ಸಾಕುನಾಯಿ (ಡಾಲಿ)ಯನ್ನು ಕಟ್ಟಿ ಹಾಕಿದ್ದರು.

ಸಂಜೆ 4:30ರ ಸುಮಾರಿಗೆ ನಾಗರ ಹಾವೊಂದು ಗೋಡೆಯ ಪಕ್ಕದಿಂದ ಮೆಲ್ಲಗೆ ಮನೆಯೊಳಗೆ ಬರಲೆತ್ನಿಸಿದೆ. ಇದನ್ನು ಕಂಡ ನಾಯಿ ಜೋರಾಗಿ ಬೊಗಳಲು ಶುರುಮಾಡಿದೆ. ನಾಯಿ ಬೊಗಳುವ ಶಬ್ದಕ್ಕೆ ಹಾವು ಹೆಡೆ ಎತ್ತಿ ನೆಲಕ್ಕೆ ಕುಕ್ಕಿ ಬುಸುಗುಡಲು ಶುರು ಮಾಡಿದೆ.

ಎಷ್ಟು ಹೊತ್ತಾದರೂ ನಾಯಿ ಬೊಗಳುವುದನ್ನು ನಿಲ್ಲಿಸದೇ ಇದ್ದಾಗ ಮಹೇಂದ್ರ ಅವರು ಎದ್ದು ಹೊರ ಬಂದು ನೋಡಿದ್ದಾರೆ. ಆಗ ನಾಯಿ ಮತ್ತು ಹಾವು ಎದುರು ಬದುರಿಗಿದ್ದವು.

ನಂತರ ಸ್ನೇಕ್ ಗಿರೀಶ್ ಅವರಿಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಮೈಸೂರು: ಅಪಘಾತದಿಂದ ಗಾಯಗೊಂಡಿದ್ದ ಲಂಗೂರ್ ಕೋತಿ ಮರಿಗೆ ಚಿಕಿತ್ಸೆ