ಗಂಗಾವತಿ: ಕಗ್ಗತ್ತಲಲ್ಲಿ ಅದೂ ಜನರ ಸಂಚಾರ ಸ್ಥಗಿತವಾದ ಬಳಿಕ ಮೊಸಳೆಯೊಂದು ಜನವಸತಿ ಪ್ರದೇಶಕ್ಕೆ ನುಗ್ಗಿ ಮನೆಯ ಮುಂದೆ ಕಾಣಿಸಿಕೊಂಡ ಘಟನೆ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ನಡೆದಿದೆ.

ಆನೆಗೊಂದಿ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿರುವ ವೆಂಕಟರಮಣ ಎಂಬುವವರ ಮನೆಯ ಆವರಣದಲ್ಲಿ ಮೊಸಳೆ ಪತ್ತೆಯಾಗಿದೆ. ಕೂಡಲೇ ಮನೆಯವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ನಾಯಕ ಅವರಿಗೆ ಕರೆ ಮಾಡಿದ್ದಾರೆ.

ಪಂಚಾಯಿತಿ ಅಧ್ಯಕ್ಷೆಯ ಬದಲಿಗೆ ಸ್ಥಳಕ್ಕೆ ಆಗಮಿಸಿ ಅವರ ಪತಿ ಹೊನ್ನಪ್ಪ ನಾಯಕ್ ತಕ್ಷಣ ಅರಣ್ಯ ಸಿಬ್ಬಂದಿಯನ್ನು ಸ್ಥಳಕ್ಕೆ ಕೆರೆಯಿಸಿ ಮಧ್ಯರಾತ್ರಿಯೇ ಕಾರ್ಯಾಚರಣೆ ಮಾಡಿ ಮೊಸಳೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯರಾತ್ರಿ ಮೂತ್ರವಿಸರ್ಜನೆಗೆ ಎಂದು ಎದ್ದ ಮನೆಯ ಮಾಲಿಕನಿಗೆ ಮನೆಯ ಆವರಣದಲ್ಲಿ ಮೊಸಳೆ ಇರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜನವಸತಿ ಪ್ರದೇಶದ ಸಮೀಪದಲ್ಲಿಯೇ ತುಂಗಭದ್ರಾ ನದಿ ಇದೆ.

ನದಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮೊಸಳೆಗಳಿದ್ದು, ಹರಿಯುವ ನೀರಿನ ಪ್ರಮಾಣ ಕಡಿಮೆಯಾದಾಗ ಆಹಾರ ಅರಿಸಿಕೊಂಡು ಕೋಳಿ ಅಥವಾ ನಾಯಿ ಹಿಡಿಯಲು ಬಂದಿರಬೇಕೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮೊಸಳೆಯನ್ನು ಹಿಡಿದ ಅರಣ್ಯ ಸಿಬ್ಬಂದಿ ಮತ್ತೆ ನದಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಹುಸ್ಕೂರು ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ