ಚಾಮರಾಜನಗರ: ರಾಜ್ಯದಲ್ಲಿ ಪವರ್ ಶೇರಿಂಗ್ ಜಟಾಪಟಿಯ ನಡುವೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಒಕ್ಕಲಿಗರ ಸಂಘ ಇಂದು ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿತು.

ಒಕ್ಕಲಿಗ ಸಮುದಾಯದ ಮುಖಂಡ ಹಾಗೂ ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಪುಟ್ಟಸ್ವಾಮಿಗೌಡ ನೇತೃತ್ವದಲ್ಲಿ ಸಮುದಾಯದವರು ದೇವಾಲಯದ ಆವರಣದಲ್ಲಿ ಸೇರಿ "ಮುಂದಿನ ಮುಖ್ಯಮಂತ್ರಿ", "ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಜಯವಾಗಲಿ" ಎಂಬ ಘೋಷಣೆಗಳನ್ನು ಕೂಗಿದರು.

ಡಿಕೆಶಿ ಫೋಟೋ ಹಿಡಿದು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದರು. ಸಂಕಲ್ಪದ ವೇಳೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥನೆ ಸಲ್ಲಿಸಿದ ಅರ್ಚಕರು, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಬೇಕು, ಆಗ್ತಾರೆ ಎಂದು ಹೇಳಿದರು. ಪೂಜೆಯ ಬಳಿಕ ಶ್ರೀ ಚಾಮರಾಜೇಶ್ವರ ಸ್ವಾಮಿಗೆ 21 ಈಡುಗಾಯಿ ಒಡೆಯಲಾಯಿತು.

ಒಕ್ಕಲಿಗರ ಮುಖಂಡ ಪುಟ್ಟಸ್ವಾಮಿ ಗೌಡ ಮಾತನಾಡಿ, "ಹಳೆ ಮೈಸೂರು ಭಾಗ ಒಕ್ಕಲಿಗರ ಭದ್ರಕೋಟೆ. ಜೆಡಿಎಸ್ ಪ್ರಾಬಲ್ಯವಿರುವ ಕಡೆ ಈ ಬಾರಿ ಕಾಂಗ್ರೆಸ್ಗೆ ಸಾಲಿಡ್ ಆಗಿ ಮತ ಹಾಕಿದ್ದೇವೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಅನ್ನೋ ಒಂದೇ ಕಾರಣಕ್ಕೆ ಮತ ಹಾಕಿದೆವು. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಸಿಗದೇ ಹೋದರೆ ಡಿಕೆಶಿ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟಲಿ. ಇಲ್ಲವೇ ಬೇರೆ ಪಕ್ಷಕ್ಕೆ ಹೋಗಲಿ. ಯಾವ ಪಕ್ಷದವರು ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡ್ತಾರೋ ಆ ಪಕ್ಷಕ್ಕೆ ಒಕ್ಕಲಿಗರ ಬೆಂಬಲವಿದೆ, ಕಾಂಗ್ರೆಸ್ ಪಕ್ಷಕ್ಕೆ ನಾವು ಪಾಠ ಕಲಿಸುತ್ತೇವೆ" ಎಂದು ಎಚ್ಚರಿಸಿದ ಅವರು "ಬಿಜೆಪಿಗೆ ಡಿಕೆಶಿ ಹೋದರೆ ನಮ್ಮ ಸಂಪೂರ್ಣ ಬೆಂಬಲವಿದೆ" ಎಂದರು.

ಇದನ್ನೂ ಓದಿ: 'ಡಿ.ಕೆ.ಶಿವಕುಮಾರ್ ಸಿಎಂ ಆಗಲಿ': ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿರಥ ಎಳೆದು ಅಭಿಮಾನಿಗಳ ವಿಶೇಷ ಸೇವೆ