ತುಮಕೂರು: ಜಿಲ್ಲೆಯಲ್ಲಿ ತೆಂಗಿನ ಬೆಳೆಗೆ ನುಸಿ ರೋಗ ವ್ಯಾಪಕವಾಗಿ ಹರಡಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವಲ್ಲಿ ಹಾಗೂ ಪರಿಹಾರ ರೂಪದಲ್ಲಿ ಔಷಧಿಗಳನ್ನು ರೈತರಿಗೆ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿಯಿಂದ ಇಂದು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ನಗರದ ಚರ್ಚ್ ಸರ್ಕಲ್ನಿಂದ ಹೊರಟ ಪ್ರತಿಭಟನಾಕಾರರು, ಜಂಟಿ ಕೃಷಿ ನಿರ್ದೇಶಕರ ಕಚೇರಿವರೆಗೂ ರಾಜ್ಯ ಸರ್ಕಾರದ ಧೋರಣೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಪಂಪ್ಸೆಟ್ ಸೇರಿದಂತೆ ವಿವಿಧ ಕಾಮಗಾರಿಗಳ ಯೋಜನೆಗಳನ್ನು ಮಾಡುವ ಚಿಂತನೆಯಲ್ಲಿ ಇಲ್ಲದಂತಹ ರಾಜ್ಯ ಸರ್ಕಾರ, ಕೇವಲ ಕುರ್ಚಿ ಕಾದಾಟದಲ್ಲಿ ತೊಡಗಿದೆ. ವೋಟಿನ ರಾಜಕಾರಣಕ್ಕಾಗಿ ಕೆಲವೊಂದು ಯೋಜನೆಗಳ ಅನುಷ್ಠಾನದಲ್ಲಿ ತೊಡಗಿದ್ದಾರೆ. ಅಲ್ಲದೆ, ರೈತರ ನಿಜವಾದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಚಿಂತನೆಯಲ್ಲಿ ತೊಡಗಿಲ್ಲ. ಹಾಗಾಗಿ ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ಮೆಕ್ಕೆಜೋಳವನ್ನು ಖರೀದಿಸುವಂತೆ ಆದೇಶ ನೀಡಿದ್ದರೂ ಕೂಡ ರಾಜ್ಯ ಸರ್ಕಾರವು ಕೇವಲ ಅಲ್ಪ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿಸಲು ಮುಂದಾಗಿರುವುದು ಸರಿಯಲ್ಲ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ತುಮಕೂರು ಜಿಲ್ಲೆಯಲ್ಲಿ ತೆಂಗು ಹಾಗೂ ಅಡಕೆ ಬೆಳೆಗೆ ರೋಗಗಳು ವ್ಯಾಪಿಸಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗೆ ಜಿಲ್ಲಾಡಳಿತ ಬರಬೇಕು. ಅಲ್ಲದೇ ರೈತರ ವಿವಿಧ ಬೇಡಿಕೆಗಾಗಿ ಡಿ. 8ರಂದು ಬಿಜೆಪಿ ವತಿಯಿಂದ ಬೆಳಗಾವಿಯ ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರ: ಆಳುವವರ ವಿರುದ್ಧ ಸಿಡಿದೆದ್ದ ಉದ್ಯೋಗಾಕಾಂಕ್ಷಿಗಳು, ಪೊಲೀಸರಿಂದ ಬ್ರೇಕ್