ಮೈಸೂರು: ಕುವೆಂಪು ನಗರದ ನ್ಯೂ-ಕಾಂತರಾಜ ಅರಸ್ ರಸ್ತೆಯಲ್ಲಿ ಬುಧವಾರ ಸಂಜೆ ಮುಳ್ಳುಹಂದಿ ಕಾಣಿಸಿಕೊಂಡು, ಸಾರ್ವಜನಿಕರಿಗೆ ಆತಂಕ ಮೂಡಿಸಿತು. ಸಂಜೆ ವಿಜಯ ಬ್ಯಾಂಕ್ ಸರ್ಕಲ್ ಮತ್ತು ಶಾರದಾ ದೇವಿ ನಗರದ ವೃತ್ತದ ನಡುವಿನ ರಸ್ತೆ ದಾಟುವಾಗ ವಾಹನವೊಂದು ಅದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುಳ್ಳುಹಂದಿ ಗಾಯಗೊಂಡಿದೆ.

ಮುಳ್ಳುಹಂದಿಯನ್ನು ಕಂಡ ಸಾರ್ವಜನಿಕರು, ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬರುವಷ್ಟರಲ್ಲಿ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು, ವಾಹನ ಸವಾರರು, ತಮ್ಮ ವಾಹನಗಳನ್ನು ನಿಲ್ಲಿಸಿ ಮುಳ್ಳುಹಂದಿಯ ಫೋಟೋ ಮತ್ತು ವಿಡಿಯೋ ಮಾಡಲು ಮುಂದಾಗಿದ್ದರು. ಇದರಿಂದ ಸ್ಥಳದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಮುಳ್ಳುಹಂದಿಯನ್ನು ಹಿಡಿದರು. ರಕ್ಷಣೆ ಬಳಿಕ ಚಾಮರಾಜೇಂದ್ರದ ಮೃಗಾಲಯದ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಡಿಸಿಎಫ್ ಪರಮೇಶ್ ಮಾತನಾಡಿ, ನಗರ ಪ್ರದೇಶದೊಳಗೆ ಮುಳ್ಳುಹಂದಿ ಹೇಗೆ ಬಂದಿದೆ ಎಂಬುವುದರ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಕಲೆ ಹಾಕುತ್ತೇವೆ. ಸಿಕ್ಕಿರುವ ಮುಳ್ಳುಹಂದಿ ಆರೋಗ್ಯವಾಗಿದ್ದು, ಚಿಕ್ಕನಹಳ್ಳಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಬೆಮಲ್ ಕಂಪನಿ ಆವರಣದಲ್ಲಿ ಹುಲಿ ಪ್ರತ್ಯಕ್ಷ! ಹೆಚ್ಚಿದ ಆತಂಕ