Surprise Me!

ಬಾಗಲಕೋಟೆ: ಐತಿಹಾಸಿಕ ಮುಚಖಂಡಿ ವೀರಭದ್ರೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ

2025-12-10 3 Dailymotion

ಬಾಗಲಕೋಟೆ: ಕಾರ್ತಿಕೋತ್ಸವದ ಅಂಗವಾಗಿ ಮುಚಖಂಡಿ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ಶೃದ್ಧಾಭಕ್ತಿಯಿಂದ ಅದ್ದೂರಿಯಾಗಿ ಜರುಗಿತು. ಉತ್ತರ ಕರ್ನಾಟಕದಲ್ಲಿಯೇ ಉಗ್ರಸ್ವರೂಪದ ಹಾಗೂ ನಂಬಿದ ಭಕ್ತರ ಸಂಕಷ್ಟ ನಿವಾರಿಸುವವ ವೀರಭದ್ರೇಶ್ವರ ದೇವರು ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಉತ್ಸವದ ಹಿನ್ನೆಲೆಯಲ್ಲಿ, ವೀರಭದ್ರೇಶ್ವರನಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ರುದ್ರಪಠಣ, ಮಹಾಮೃತ್ಯುಂಜಯ ಮಂತ್ರ ಪಠಣದೊಂದಿಗೆ ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬೆಣ್ಣೂರಿನಿಂದ ಬಂದ ಕಳಸವನ್ನು ಪ್ರತಿಷ್ಠಾಪಿಸಿ, ವೀರಾಪುರದಿಂದ ತಂದ ಹಗ್ಗವನ್ನು ರಥಕ್ಕೆ ಜೋಡಿಸಲಾಯಿತು. ಸಿಮಿಕೇರಿ, ಯಂಡಿಗೇರಿ ಹಾಗೂ ಮುಚಖಂಡಿ ನಂದಿಕೋಲುಗಳು ಆಗಮಿಸಿದವು. ಭವ್ಯ ರಥವನ್ನು ತಳಿರುತೋರಣ, ಪುಷ್ಪಗಳಿಂದ ಶೃಂಗರಿಸಲಾಗಿತ್ತು. ಮೊದಲಿಗೆ ಸಣ್ಣ ರಥೋತ್ಸವ ಹಾಗೂ ಬಳಿಕ 5 ಗಂಟೆಗೆ ಮಹಾರಥೋತ್ಸವದಲ್ಲಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ದೇವಸ್ಥಾನದಿಂದ ಗ್ರಾಮದ ಅಗಸಿ ಬಾಗಿಲಿನವರೆಗೆ ರಥವು ಸಾಗಿತು.

ಭಕ್ತರು ಚುರುಮುರಿ, ಬಾಳೆಹಣ್ಣು, ಉತ್ತತ್ತಿಗಳನ್ನು ರಥಕ್ಕೆ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆದರು. ಮಹಿಳೆಯರ ಆರತಿ ಸೇವೆ, ನಂದಿಕೋಲು ವಾದ್ಯ ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿಯ ವೈಭವವು ನೋಡುಗರ ಮನಸೂರೆಗೊಂಡಿತು. ಜಯ.. ಜಯ.. ವೀರಭದ್ರ ಎಂಬ ಜಯಕಾರ ಮೊಳಗಿತು. ಮಹಾರಥೋತ್ಸವದ ಬಳಿಕ ದೇಗುಲದ ಆವರಣದಲ್ಲಿ ಭಕ್ತರು ದೀಪಗಳನ್ನು ಬೆಳಗುವ ಮೂಲಕ ಕಾರ್ತಿಕ ದೀಪೋತ್ಸವದ ಸಂಭ್ರಮದಲ್ಲಿ ಭಾಗಿಯಾದರು. ರಾತ್ರಿ ನಡೆದ ಶ್ರೀ ಕೃಷ್ಣ ಪಾರಿಜಾತವು ಸಾಂಪ್ರದಾಯಿಕ ಜಾನಪದ ಸೊಗಡನ್ನು ಬಿಂಬಿಸಿತು.

ಜಾತ್ರಾ ಮಹೋತ್ಸವದಲ್ಲಿ ಶ್ರೀ ವೀರಭದ್ರೇಶ್ವರ ಜೀಣೋದ್ದಾರ ಕಮಿಟಿ, ವೀರಭದ್ರೇಶ್ವರ ಕಾರ್ತಿಕೋತ್ಸವ ಹಾಗೂ ರಥೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮುಚಖಂಡಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಸೇರಿದಂತೆ ರಾಜ್ಯದ ಇತರೆಡೆಗಳಿಂದ ಭಕ್ತರು ಆಗಮಿಸಿದ್ದರು.

ಇದನ್ನೂ ಓದಿ: ಮೈಸೂರು: ಕಪಿಲಾ ನದಿಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ

Buy Now on CodeCanyon