ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕೋಣೆಬೈಲು ಗ್ರಾಮದಲ್ಲಿ ಎತ್ತರದಿಂದ ಬಿದ್ದು ಗಾಯಗೊಂಡಿದ್ದ ದೃಷ್ಟಿಹೀನ ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿ, ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.

ಎರಡು ಕಣ್ಣುಗಳು ಕಾಣದ ಕಾರಣ ಬೃಹತ್ ಗಾತ್ರದ ಕಾಡುಕೋಣ ಸರಿಯಾಗಿ ಆಹಾರ ಸೇವಿಸದೇ, ಬಡಕಲಾಗಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಇದನ್ನು ಉಪಚರಿಸಿದ್ದಾರೆ.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ವೈದ್ಯಾಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡಲು ಕಾರ್ಕಳದಿಂದ ಆಗಮಿಸಿದ ನುರಿತ ವೈದ್ಯರ ತಂಡವು ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿ, ಗಾಯಗಳಿಗೆ ಅಗತ್ಯ ವೈದ್ಯಕೀಯ ಉಪಚಾರ ಮಾಡಿದ್ದಾರೆ.

ಭಾರಿ ಗಾತ್ರದ ಈ ಕಾಡುಕೋಣ ಎರಡು ಕಣ್ಣುಗಳನ್ನು ಕಳೆದುಕೊಂಡು ಎಲ್ಲೆಂದರಲ್ಲಿ ಹೋಗುತ್ತಿತ್ತು. ಅದಕ್ಕೆ ಸರಿಯಾಗಿ ಆಹಾರ ಸೇವಿಸಲೂ ಕೂಡ ಆಗುತ್ತಿರಲಿಲ್ಲ. ನಿತ್ಯ ಈ ಭಾಗದಲ್ಲಿ ಗಸ್ತು ತಿರುಗುವ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಗಮನಿಸಿ ಕೂಡಲೇ ಕಾರ್ಯಪ್ರವೃತ್ತರಾಗಿ ಕಾಡು ಕೋಣಕ್ಕೆ ಚಿಕಿತ್ಸೆ ನೀಡಿದ್ದಾರೆ. ಇದೀಗ ಆ ಕಾಡುಕೋಣ ಆರೋಗ್ಯವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ನಿಗಾ ಇಟ್ಟು ಅದರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದ್ದಾರೆ.

ಚಿಕ್ಕಮಗಳೂರು ತಾಲೂಕು, ಬಾಳೆಹೊನ್ನೂರು, ಎನ್. ಆರ್. ಪುರ, ಶೃಂಗೇರಿಯಲ್ಲಿ ಅತಿ ಹೆಚ್ಚಾಗಿ ಕಾಡಾನೆಗಳ ಹಾವಳಿ ಕಾಣಿಸಿಕೊಂಡಿದ್ದರೆ, ಮೂಡಿಗೆರೆ ತಾಲೂಕಿನ ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ರಸ್ತೆ ಬದಿಯಲ್ಲಿ ಕಾಡು ಕೋಣಗಳು ಹೆಚ್ಚಾಗಿ ಕಾಣಿಸಿಕೊಂಡು ಪ್ರತಿನಿತ್ಯ ಜನರನ್ನು ಭಯಭೀತಗೊಳಿಸುತ್ತಿದ್ದರೆ, ಇನ್ನೊಂದು ಕಡೆ, ತೋಟಗಳಿಗೆ ಹಾಗೂ ಹೊಲ ಗದ್ದೆಗಳಿಗೆ ನುಗ್ಗಿ ಕಾಡು ಕೋಣಗಳು ಬೆಳೆಗಳನ್ನು ನಾಶ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

ಇದನ್ನೂ ಓದಿ : ಚಿಕ್ಕಮಗಳೂರು: ಒಮ್ಮೆಲೇ ರಸ್ತೆ ದಾಟಿದ 25ಕ್ಕೂ ಹೆಚ್ಚು ಕಾಡಾನೆಗಳು; ಬೆಚ್ಚಿಬಿದ್ದ ರೈತರು - WILD ELEPHANTS CROSSED ROAD