ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮಂಜಿನಾಟ ಮುಂದುವರೆದಿದೆ. ಪ್ರತಿನಿತ್ಯ ತನ್ನ ನೈಸರ್ಗಿಕ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುವ ಜಿಲ್ಲೆಯಲ್ಲಿ ವಿಭಿನ್ನ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಚುಮು ಚುಮು ಚಳಿ ಜನರಿಗೆ ವಿಶೇಷ ಅನುಭವವನ್ನು ನೀಡುತ್ತಿದೆ.

ಈ ವಿಶೇಷ ಅನುಭವವನ್ನು ಪಡೆಯಲು ಹಾಗೂ ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯಲು ರಾಜ್ಯದ ಮೂಲೆ ಮೂಲೆಯಿಂದಲೂ ಪ್ರವಾಸಿಗರು ಜಿಲ್ಲೆಗೆ ದಾಂಗುಡಿ ಇಡುತ್ತಿದ್ದು, ಇಲ್ಲಿನ ನೈಸರ್ಗಿಕ ಸೌಂದರ್ಯ, ಇಲ್ಲಿನ ವಾತಾವರಣ, ನಿರಂತರವಾಗಿ ಬೀಳುತ್ತಿರುವ ಮಂಜಿಗೆ ಮನಸೋತು ತಮ್ಮನ್ನೇ ತಾವು ಮರೆತು ಹೊಸ ಲೋಕಕ್ಕೆ ಪ್ರವೇಶ ಪಡೆದಿದ್ದೇವಾ ಎಂಬ ಅನುಭವವನ್ನು ಪ್ರವಾಸಿಗರು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ, ದಟ್ಟವಾದ ಮಂಜು ಆವರಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ, ಕವಿಕಲ್ ಗಂಡಿ, ಸೀತಾಳಯ್ಯನ ಗಿರಿ, ಕೆಮ್ಮಣ್ಣು ಗುಂಡಿ, ಕುದುರೆಮುಖ, ನೆತ್ತಿಚೌಕ, ಎತ್ತಿನ ಭುಜ, ಶಿಶಿಲಾ, ದೇವರಮನೆ, ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಮಲೆಯ ಮಾರುತ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದಟ್ಟ ಮಂಜು ಕವಿದಿದೆ.

ದಟ್ಟ ಮಂಜಿನ ಜೊತೆಗೆ ತಣ್ಣನೆ ಗಾಳಿಯೂ ಜೋರಾಗಿ ಬೀಸುತ್ತಿದ್ದು, ಈ ಮೈ ಕೊರೆಯುವ ಆಹ್ಲಾದಕರ ವಾತಾವರಣಕ್ಕೆ ಪ್ರವಾಸಿಗರು ಪುಳಕಿತರಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಅಲ್ಲದೆ ದೇಶದ ವಿವಿಧ ಭಾಗಗಳಿಂದ ಬಂದಿರುವ ಪ್ರವಾಸಿಗರಿಗೆ ಈ ವಾತಾವರಣ ರೋಮಾಂಚನ ಮೂಡಿಸಿದೆ. ಒಬ್ಬರಿಗೊಬ್ಬರು ಕಾಣದಷ್ಟು ಮಂಜು ಇದ್ದು, ತುಂಬಾ ವರ್ಷಗಳ ನಂತರ ಈ ರೀತಿಯ ವಾತಾವರಣ ನೋಡಲು ಸಿಗುತ್ತಿದೆ.

ಕಳೆದ ಮೂರು ದಿನಗಳಿಂದ ಮಂಜಿನ ಆಟ ಮುಂದುವರೆದಿದ್ದು, ಕೇವಲ 20 ಅಡಿ ದೂರದಲ್ಲಿ ನಿಂತರು ಜನರು ಕಾಣದಷ್ಟು ಮಂಜು ದಟ್ಟವಾಗಿ ಬೀಳುತ್ತಿದೆ.

ಇವುಗಳನ್ನೂ ಓದಿ:

ಎರಡೂ ಕಣ್ಣು ಕಳೆದುಕೊಂಡ ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ

ಮೈಸೂರು: ಆನೆ ದಾಳಿಗೆ 5 ಬೈಕ್ಗಳು ಜಖಂ - VIDEO