ಆನೇಕಲ್ (ಬೆಂಗಳೂರು): ಇತ್ತೀಚಿಗೆ ಗಡಿಭಾಗದಲ್ಲಿ ಆನೆಗಳ ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಇಂದು ಆನೇಕಲ್ ತಾಲೂಕಿನ ವಣಕನಹಳ್ಳಿ ಹಾಗೂ ಕಾಳನಾಯಕನ ಹಳ್ಳಿ ಗ್ರಾಮದ ಸುತ್ತಮುತ್ತ ಸುಮಾರು 11 ಆನೆಗಳು ಬೀಡುಬಿಟ್ಟಿವೆ. ಅಲ್ಲದೇ, ಸುತ್ತಮುತ್ತಲ ಗ್ರಾಮದ ಅನೇಕ ರೈತರು ಬೆಳೆಸಿರುವ ಬೆಳೆಯನ್ನು ನಾಶ ಮಾಡಿ ಸಾಕಷ್ಟು ತೊಂದರೆ ನೀಡುತ್ತಿವೆ.

ಹೀಗಾಗಿ, ಬೆಳಗಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ಸಹ ಪಟ್ಟು ಬಿಡದ ಆನೆಗಳ ಹಿಂಡು ಗ್ರಾಮದ ಪಕ್ಕದಲ್ಲಿಯೇ ಉಳಿದುಕೊಂಡಿವೆ. ಇದರಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಫುಲ್ ಅಲರ್ಟ್ ಘೋಷಿಸಿದ್ದು, ರಾತ್ರಿ ವೇಳೆ ಯಾವೊಬ್ಬ ಗ್ರಾಮಸ್ಥರೂ ಹೊರಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ರೈತರ ಹೊಲಗಳಿಗೆ ಆನೆಗಳು ಲಗ್ಗೆ ಇಟ್ಟು ದಾಂಧಲೆ ಮಾಡುವ ಸಾಧ್ಯತೆ ಇದ್ದು, ಇದರಿಂದಾಗಿ ರೈತರು ಹಾಗೂ ಸ್ಥಳೀಯರು ಕಂಗಾಲಾಗಿದ್ದಾರೆ. ಈ ನಡುವೆ ಯುವಕರು ಆನೆಗಳನ್ನು ಓಡಿಸುವ ಭರದಲ್ಲಿ ಅವುಗಳನ್ನು ಕೆಣಕುತ್ತಿದ್ದರಿಂದ ಕಾಡಾನೆಯೊಂದು ಮರವನ್ನೇ ಗುದ್ದಿ ಹೆದರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯಕ್ಕೆ ಆನೆ ಓಡಿಸುವ ಕಾರ್ಯಾಚರಣೆ ನಿಂತಿದೆ. ನಾಳೆ ಮತ್ತೆ ಆನೆಯನ್ನು ಓಡಿಸುವ ಕೆಲಸಕ್ಕೆ ಸಿಬ್ಬಂದಿ ಮುಂದಾಗಲಿದ್ದಾರೆ.

ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜಲ್ ಪಾಟೀಲ್ ಅವರು ಪ್ರತಿಕ್ರಿಯಿಸಿದ್ದು, 'ಈಗಾಗಲೇ ಆನೆಗಳು ಗ್ರಾಮಗಳತ್ತ ಬರದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ರೈಲ್ವೆ ಬ್ಯಾರಿಕೇಡ್ ಗೇಟುಗಳನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಳವಡಿಸಲಿದ್ದೇವೆ. ಜೊತೆಗೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಹಾಸನ: ಕಾಡಾನೆ ದಾಳಿಗೆ ಮಹಿಳೆ ಬಲಿ!