ಮೈಸೂರು : ಮೈಸೂರು ಭಾಗದ ಪ್ರಮುಖ ಜಾತ್ರೆಯದ ಸುತ್ತೂರು ಜಾತ್ರೆ ಜನವರಿ 15 ರಿಂದ 20ರ ವರೆಗೆ ನಡೆಯಲಿದೆ. ಇದಕ್ಕೆ ಸಿದ್ಧತೆಗಳು ಆರಂಭವಾಗಿದೆ. ಅದರ ವಿಡಿಯೋ ಇಲ್ಲಿದೆ.

ಕಪಿಲಾನದಿ ದಂಡೆಯ ಮೇಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರ ಸುತ್ತೂರು. ಇಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕೃಷಿ ಬಗ್ಗೆ ಹಾಗೂ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಿಳಿಸಲಾಗುತ್ತದೆ.

ಈಗ ಸುತ್ತೂರು ಜಾತ್ರೆಗೆ ಸಿದ್ಧತೆ ಆರಂಭವಾಗಿದೆ. 6 ದಿನಗಳ ಈ ಧಾರ್ಮಿಕ ಉತ್ಸವದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಸ್ಥಳದಲ್ಲಿ ವಸ್ತು ಪ್ರದರ್ಶನ, ಕೃಷಿ ವಸ್ತು ಪ್ರದರ್ಶನ, ಕೈಮಗ್ಗ, ಜವಳಿ, ಕರಕುಶಲ ವಸ್ತುಗಳು, ಗ್ರಾಮೀಣ ಉತ್ಪನ್ನ ಸೇರಿದಂತೆ ಹೊಸ ರೀತಿಯ ಕೃಷಿ ಆವಿಷ್ಕಾರಗಳು ಜಾತ್ರೆಯಲ್ಲಿ ಇರಲಿವೆ.

ಮೈಸೂರಿನ ಪ್ರಾದೇಶಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ ಹಾಗೂ ಈರನಗೆರೆ ಬದನೆ ಬೆಳೆಗಳ ಪ್ರಾತ್ಯಕ್ಷಿಕೆ ಇರಲಿದೆ. ಬಳ್ಳಿ, ಸಸಿಗಳ ಲೋಕ, ಕಸಿ ಟೊಮೆಟೊ, ಬದನೆ ಬೆಳೆ, ವೈವಿಧ್ಯಮಯ ಪುಪ್ಪ ಪ್ರದರ್ಶನವನ್ನು ಪ್ರಾತ್ಯಕ್ಷಿಕೆ ಸಹಿತ ಏರ್ಪಡಿಸಲಾಗಿದೆ.

ಒಂದು ಎಕರೆ ಕೃಷಿ ಬ್ರಹ್ಮಾಂಡದಲ್ಲಿ ಹಲವಾರು ದೇಶಿ ಹಾಗೂ ವಿದೇಶಿ ತರಕಾರಿಗಳು, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು, ರೇಷ್ಮೆಕೃಷಿ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೃಷಿ ಅಭಿವೃದ್ಧಿ ಇಲಾಖೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಇರಲಿದೆ. ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ಮತ್ತೊಂದು ಪರ್ಯಾಯಕ್ಕೆ ಕೃಷ್ಣನಗರಿ ಸಜ್ಜು: ಈ ಬಾರಿ ಶಿರೂರು ವೇದವರ್ಧನ ತೀರ್ಥರಿಂದ ಸರ್ವಜ್ಞ ಪೀಠಾರೋಹಣ