ಚಾಮರಾಜನಗರ: ಆಹಾರ ಅರಸಿ ಜಮೀನುಗಳತ್ತ ಬಂದಿರುವ ಕಾಡಾನೆಯೊಂದು ಬಳಿಕ ಗುಂಡ್ಲುಪೇಟೆ ಪಟ್ಟಣದೊಳಗೆ ಪ್ರವೇಶಿಸಿ ರೌಂಡ್ಸ್ ಹಾಕಿರುವ ಘಟನೆ ಗುರುವಾರ ಮುಂಜಾನೆ 3.30 ರ ಸುಮಾರಿಗೆ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ಬೀದಿಯಲ್ಲಿ ಸಂಚರಿಸಿ ಮನೆ ಮುಂಭಾಗವಿದ್ದ ದ್ವಿಚಕ್ರವಾಹನವನ್ನು ಜಖಂಗೊಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆನೆ ಬಂದ ವಿಚಾರ ತಿಳಿದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ದಿಢೀರ್ ಎಂಟ್ರಿ ಕೊಟ್ಟ ಕಾಡಾನೆ ಕಂಡು ನಾಯಿಗಳು ಬೊಗಳಿದ ಹಿನ್ನೆಲೆ ಅವುಗಳನ್ನು ಅಟ್ಟಿಸಿಕೊಂಡು ಬಂದು ಬೈಕ್ಗಳನ್ನು ಜಖಂ ಮಾಡಿದೆ. ಆ ಹೊತ್ತಿನಲ್ಲಿ ಸಾರ್ವಜನಿಕರ ಓಡಾಟ ಇಲ್ಲದ ಹಿನ್ನೆಲೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕಿರಣಗೌಡ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಆನೆ ಓಡಾಟದ ದೃಶ್ಯ ಸೆರೆಯಾಗಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆ : ಗುಂಡ್ಲುಪೇಟೆ ಪಟ್ಟಣದಲ್ಲಿ ಕಾಣಿಸಿಕೊಂಡ ಕಾಡಾನೆ ಸದ್ಯ ಕುಂದಕೆರೆ ವಲಯದ ಹೆಗ್ಗವಾಡಿ ಗುಡ್ಡದಲ್ಲಿದ್ದು, ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ನಡೆದಿದೆ.

ಈ ಕುರಿತು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಅವರು ಮಾತನಾಡಿದ್ದು, 'ಕಾಡಾನೆ ಯಾವ ಭಾಗದಿಂದ ಬಂದಿದೆ ಎಂಬುದು ಖಚಿತವಾಗಿಲ್ಲ. ಮೊದಲಿಗೆ ಪಟ್ಟಣದಲ್ಲಿ ಕಾಣಿಸಿಕೊಂಡು ಬಳಿಕ ದಾರಿ ಬೇಗೂರು, ಆ ನಂತರ ಯರಿಯೂರು ಕಡೆಗೆ ಹೋಗಿತ್ತು. ಸದ್ಯ ಹೆಗ್ಗವಾಡಿಯ ಕಾಡಂಚಿನಲ್ಲಿ ಬೀಡು ಬಿಟ್ಟಿದೆ. ಕಾಡಿಗಟ್ಟಲು ಕಾರ್ಯಾಚರಣೆ ನಡೆದಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಏಕಕಾಲದಲ್ಲಿ ರಸ್ತೆ ದಾಟಿದ 17ಕ್ಕೂ ಹೆಚ್ಚು ಕಾಡಾನೆಗಳು: 600ಕ್ಕೂ ಹೆಚ್ಚು ಅಡಿಕೆ ಮರ ನೆಲಸಮ