ಚಿಕ್ಕಮಗಳೂರು: ಬಯಲು ಸೀಮೆ ಭಾಗವಾದ ತರೀಕೆರೆ ಹಾಗೂ ಕಡೂರು ತಾಲೂಕಿನಲ್ಲಿ ಒಂದೇ ದಿನ ಎರಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ನಿನ್ನೆ (ಗುರುವಾರ) ಬೆಳಗ್ಗೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ 4 ವರ್ಷ ಪ್ರಾಯದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಲಾಕ್ ಆಗಿತ್ತು. ಈ ಚಿರತೆ 8 ನಾಯಿಯನ್ನು ಬೇಟೆಯಾಡಿತ್ತು. ಅದಾದ ಬಳಿಕ ಮಧ್ಯಾಹ್ನ ವೇಳೆಗೆ ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದಲ್ಲಿ ಮತ್ತೊಂದು ಬೋನ್ ಇಡಲಾಗಿತ್ತು. ಇಂದು ಬೆಳಗ್ಗೆ ಸುಮಾರು ಆರು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಈ ಬೋನಿನಲ್ಲಿ ಸೆರೆಯಾಗಿದೆ.

ಚಿರತೆ ಕಳೆದೊಂದು ತಿಂಗಳಿಂದ ಹಿರೇನಲ್ಲೂರು, ಕಾಮನಕೆರೆ, ದಾಸರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸುತ್ತಿದ್ದಿದರಿಂದ ಹಳ್ಳಿಗರಲ್ಲಿ ಆತಂಕ ಹೆಚ್ಚಾಗಿತ್ತು. ಒಂದು ತಿಂಗಳಲ್ಲಿ ಚಿರತೆ ಹತ್ತಕ್ಕೂ ಹೆಚ್ಚು ಕುರಿ, ಒಂದು ಹಸು ಬೇಟೆಯಾಡಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೊನೆಗೂ ಸೆರೆಯಾಯ್ತು 8 ನಾಯಿಗಳನ್ನು ಬೇಟೆಯಾಡಿದ್ದ ಚಿರತೆ!