ಮೈಸೂರು: ಮನೆಯ ಕಾಂಪೌಂಡ್ ಒಳಗೆ ಮಲಗಿದ್ದ ನಾಯಿ ಮರಿಯನ್ನು ಚಿರತೆ ಎತ್ತೊಯ್ದ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಉಂಡವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರತಾಪ್ ಎಂಬುವವರ ತೋಟದ ಮನೆಯಲ್ಲಿ ಆಗಾಗ ನಾಯಿಗಳು ಕಣ್ಮರೆಯಾಗುತ್ತಿದ್ದವು. ಇದರಿಂದಾಗಿ ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ತೋಟದ ಮನೆಯ ಕಾಂಪೌಂಡ್‌ನಿಂದ ಬಂದ ಚಿರತೆ, ಮನೆ ಬಾಗಿಲ ಮುಂದೆ ಮಲಗಿದ್ದ ನಾಯಿ ಮರಿಯನ್ನು ಎತ್ತಿಕೊಂಡು ಹೋಗಿರುವುದು ಸೆರೆಯಾಗಿದೆ.

ಹೀಗಾಗಿ, ರೈತ ಪ್ರತಾಪ್ ಅವರು ಚಿರತೆ ಬಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ, ಇಲಾಖೆಯ ಸಿಬ್ಬಂದಿ ಶುಕ್ರವಾರ ಮಧ್ಯಾಹ್ನ ಅವರ ಮನೆ ಬಳಿ ಬೋನ್ ಇರಿಸಿದ್ದು, ಅತ್ತ ಕಡೆ ಯಾರೊಬ್ಬರು ಸುಳಿಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಈಟಿವಿ ಭಾರತ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರತಾಪ್, 'ತಿಂಗಳ ಹಿಂದೆ ತೋಟದ ಮನೆಯ ಸುತ್ತ ಸಂಜೆ 7ರ ನಂತರ ಚಿರತೆ ಸುಳಿದಾಡುತ್ತದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅವರು ನಂಬಿರಲಿಲ್ಲ. ಆದರೀಗ ಸಿಸಿ ಕ್ಯಾಮರಾದಲ್ಲಿ ಚಿರತೆಯೊಂದು ನಾಯಿ ಮರಿಯನ್ನು ಎತ್ತಿಕೊಂಡು ಹೋದ ಪರಿಣಾಮ ಅರಣ್ಯ ಇಲಾಖೆ ಬೋನ್ ಇಟ್ಟಿದೆ' ಎಂದಿದ್ದಾರೆ.

ಗ್ರಾಮದ ಜಮೀನುಗಳಲ್ಲಿ ಚಿರತೆಗಳು ಸಂಜೆ ವೇಳೆಯಲ್ಲಿ ಜನರಿಗೆ ಕಾಣಿಸಿಕೊಳ್ಳುತ್ತಿವೆ. ಆದರೆ, ಇದುವರೆಗೂ ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಚಿರತೆಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: ತಾಯಿ ಬಳಿಕ ಮರಿ ಹುಲಿ ಸೆರೆ; ಮುಂದುವರೆದ ಕಾರ್ಯಾಚರಣೆ