ಚಿಕ್ಕೋಡಿ : ನಾಯಿಗೆ ಹೆದರಿದ ಬೈಕ್ ಸವಾರರೊಬ್ಬರು ವೇಗವಾಗಿ ಬೈಕ್ ಚಲಾಯಿಸಿ ಅಪಘಾತದಲ್ಲಿ ಮೃತಪಟ್ಟ ವಿಲಕ್ಷಣ ಘಟನೆ ತಾಲೂಕಿನಲ್ಲಿ ನಡೆದಿದೆ. ಕಳೆದ ಹದಿನೈದನೇ ತಾರೀಖು ಈ ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿ ವಿಶ್ವನಾಥ್ ಶಿರೋಳ (44) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ವಿವರ : ಸಂಕ್ರಾಂತಿ ಹಬ್ಬದ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಕರಿ ಆಚರಣೆ ಮಾಡುವುದು ವಾಡಿಕೆ. ಕರಿ ಮುಗಿಸಿಕೊಂಡು ಕುಂಬಾರ ಗಲ್ಲಿಯ ಮಾರ್ಗವಾಗಿ ಬೈಕ್ ಸವಾರ ಮನೆಗೆ ಹಿಂತಿರುಗುತ್ತಿದ್ದರು. ಆಗ ಬೀದಿ ನಾಯಿಯೊಂದು ಅವರ ಬೈಕ್ನ್ನು ಹಿಂಬಾಲಿಸಿದೆ. ಹೀಗಾಗಿ, ವಿಶ್ವನಾಥ ಶಿರೋಳ ಅವರು ನಾಯಿಯಿಂದ ರಕ್ಷಿಸಿಕೊಳ್ಳೋಕೆ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದಾರೆ. ನಂತರ ಚಿಕ್ಕ ಕಾಲು ದಾರಿಯಲ್ಲಿ ತಿರುವು ಬರುತ್ತಿದ್ದಂತೆ ಅವರು ನಿಯಂತ್ರಣ ಕಳೆದುಕೊಂಡು ನೇರವಾಗಿ ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದು (ಅಪಘಾತ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಥಣಿ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಶಾಲೆ ಮಕ್ಕಳು, ಬೈಕ್ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿರುವ ಸ್ಥಳೀಯರು, ಅಥಣಿ ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕಂಪ್ಲಿ ಬಳಿ ಎಣ್ಣೆ ಟ್ಯಾಂಕರ್ ಪಲ್ಟಿ: ತುಂಬಿಕೊಳ್ಳಲು ಮುಗಿಬಿದ್ದ ಜನ - VIDEO - PALM OIL TANKER OVERTURNS