ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತುಂಬಾ ದಿನಗಳ ನಂತರ ಭಾರಿ ಗಾತ್ರದ ಹುಲಿಯೊಂದು ಪ್ರತ್ಯಕ್ಷವಾಗಿದೆ. ಈ ಹುಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಹುಲಿಯ ಗಾತ್ರ ನೋಡಿದ ಜನರು ಭೀತಿಗೊಳಗಾಗಿದ್ದಾರೆ. ಇನ್ನು ಅದು ಸಂಚಾರ ಮಾಡುತ್ತಿರುವ ಪ್ರದೇಶ ನೋಡಿ ಸ್ಥಳೀಯರು ಆತಂಕಗೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಬರುವ ಅತ್ತಿಗುಂಡಿ ಪ್ರದೇಶ ಸೇರಿ ಸುತ್ತಮುತ್ತಲ ಪ್ರದೇಶ
ಭದ್ರಾ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಬಯಲು ಪ್ರದೇಶವಾದ ಈ ಗುಡ್ಡದಲ್ಲಿ ಗಂಭೀರವಾದ ರಾಜ ನಡೆಯ ಮೂಲಕ ಈ ಹುಲಿ ಸಂಚಾರ ಮಾಡಿದೆ.

ಕಳೆದ ಎರಡ್ಮೂರು ವರ್ಷಗಳ ಹಿಂದೆ ಇದೇ ಭಾಗದಲ್ಲಿ ತಾಯಿ ಹುಲಿ ಸೇರಿ ಅದರ ಮರಿಗಳು ಈ ಪ್ರದೇಶದಲ್ಲಿ ಕಾಣಿಸಿ ಕೊಂಡಿದ್ದವು. ಕೆಲವು ವರ್ಷಗಳ ಹಿಂದೆ ಒಂದು ಮಹಿಳೆಯನ್ನು ಹುಲಿ ಬಲಿ ಪಡೆದುಕೊಂಡಿತ್ತು. ನಂತರ ಆ ಹುಲಿಯನ್ನು ಸೆರೆ ಹಿಡಿದು, ಬೆಳಗಾವಿಗೆ ಸ್ಥಳಾಂತರ ಮಾಡಲಾಗಿತ್ತು.

ನಿತ್ಯ ಅತ್ತಿಗುಂಡಿ ಮೂಲಕವೇ ಈ ಭಾಗದ ಪ್ರವಾಸಿ ತಾಣಗಳಿಗೆ ಸಾವಿರಾರು ಪ್ರವಾಸಿಗರು ಸಂಚಾರ ಮಾಡುತ್ತಾರೆ. ಅದರಲ್ಲೂ ಅತ್ತಿಗುಂಡಿ, ನೆತ್ತಿಚೌಕ, ಹೊನ್ನಮ್ಮನ ಹಳ್ಳ, ದತ್ತಪೀಠ, ಮಾಣಿಕ್ಯದಾರ, ಗಾಳಿಕೆರೆ ಹಾಗೂ ಕೆಮ್ಮಣ್ಣುಗುಂಡಿ ಭಾಗಗಳಿಗೆ ಈ ರಸ್ತೆಯ ಮೇಲೆ ಹೋಗಬೇಕಾಗುತ್ತದೆ.

ಈ ಹಿಂದೆ ಕೆಮ್ಮಣ್ಣುಗುಂಡಿ ಭಾಗದಲ್ಲಿಯೂ ಇದೇ ರೀತಿ ದೊಡ್ಡ ಗಾತ್ರದ ಹುಲಿಯೊಂದು ಕಾಣಿಸಿಕೊಂಡು, ಪ್ರವಾಸಿಗರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಮುಳ್ಳಯ್ಯನ ಗಿರಿ, ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾ, ಮಾಣಿಕ್ಯಧಾರಾಕ್ಕೆ ಬರುವಂತಹ ಪ್ರವಾಸಿಗರು ಎಚ್ಚರಿಕೆಯಿಂದ ಇದ್ದರೆ ತುಂಬಾ ಅನುಕೂಲ ಆಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಸಾಕು ನಾಯಿ - ನಾಗರ ಹಾವಿನ ನಡುವೆ ಭೀಕರ ಕಾಳಗ; ಕೊನೆಗೆ ದುರಂತ - ವಿಡಿಯೋ - DOG SNAKE FIGHT VIDEO