ಮೈಸೂರು/ಕೊಡಗು: ಆನೆ ಮರಿ ಆರ್ಯನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅರಣ್ಯ ಇಲಾಖೆ ಸಂಭ್ರಮದಿಂದ ಆಚರಿಸಿದೆ. ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆರ್ಯನಿಗೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕೊಡಗಿನ ದುಬಾರೆ ಸಾಕಾನೆ ಶಿಬಿರದ ಮರಿ ಆನೆ ಆರ್ಯ. ಕಳೆದ ವರ್ಷ ಜನವರಿ 24ರಂದು ಚಿಕ್ಲಿಹೊಳೆ ಅರಣ್ಯದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಆನೆ ಮರಿ ಆರ್ಯನನ್ನು ಅರಣ್ಯ ಇಲಾಖೆ ಸಾಕುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಆರ್ಯನ ಸೊಂಡಿಲು ಹಿಡಿದು ಕೇಕ್ ಕತ್ತರಿಸಿ, ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿರಾಫೆ ಹುಟ್ಟುಹಬ್ಬ ಆಚರಣೆ: ಕಳೆದ ವರ್ಷ ಡಿಸೆಂಬರ್ 11ರಂದು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲೇ ಹುಟ್ಟಿ ಬೆಳೆದ ಯುವರಾಜ ಹೆಸರಿನ ಜಿರಾಫೆಯ 25ನೇ ವರ್ಷದ ಹುಟ್ಟುಹಬ್ಬವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಅದ್ಧೂರಿಯಾಗಿ ಆಚರಿಸಿದ್ದರು. ಯುವರಾಜನಿಗೆ ಇಷ್ಟವಾದ ಹುಲ್ಲು, ವಿವಿಧ ಕಾಳು ಹಾಗೂ ಹಣ್ಣುಗಳಿಂದ ಸಿಬ್ಬಂದಿ ವಿಶೇಷ ಕೇಕ್ ತಯಾರಿಸಿದ್ದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ಹಾಗೂ ಸಿಬ್ಬಂದಿ ಯುವರಾಜನಿಗೆ ಜನ್ಮದಿನದ ಶುಭಾಶಯ ಕೋರಿ ವಿಶೇಷ ಕೇಕ್ ತಿನ್ನಿಸಿದ್ದರು.

ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲೇ ಹುಟ್ಟಿ ಬೆಳೆದ ಜಿರಾಫೆ ಯುವರಾಜನಿಗೆ ಈಗ 25 ವರ್ಷ! ಭರ್ಜರಿ ಬರ್ತ್‌ಡೇ ಟ್ರೀಟ್