ಚಿಕ್ಕಮಗಳೂರು: ಪ್ರತಿ ವರ್ಷದಂತೆ ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಗಂಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಚೈತ್ರೋತ್ಸವ ಸಾರ್ವಜನಿಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಪ್ರದರ್ಶನದಲ್ಲಿರುವ ವಿಭಿನ್ನ ಕಲಾಕೃತಿಗಳು ಸಾರ್ವಜನಿಕರ ಮನಸೂರೆಗೊಳ್ಳುವಂತಿವೆ.

ಗಣರಾಜ್ಯೋತ್ಸವ ಹಿನ್ನೆಲೆ ಕಾಫಿನಾಡಿನಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಚೈತ್ರೋತ್ಸವ 2026 ಅನ್ನು ಏರ್ಪಡಿಸಲಾಗಿದೆ. ನಗರದ ಜನರಿಗೆ ಸಸ್ಯಕಾಶಿಯನ್ನು ತರುವ ದೃಷ್ಟಿಯಿಂದ ಸುಮಾರು ಎಂಟು ಸಾವಿರಕ್ಕೂ ಅಧಿಕ ಹೂಗಳಿಂದ ಚೈತ್ರೋತ್ಸವ ಆಯೋಜಿಸಲಾಗಿದೆ.

ಈ ಸುಂದರಲೋಕಕ್ಕೆ ಕಾಲಿಡುತ್ತಿದ್ದಂತೆ ಸಿಗುವ ಹೂವಿನಿಂದ ತಯಾರಾದ ಚಿಕ್ಕಮಗಳೂರು ಸೆಲ್ಫಿ ಬೋರ್ಡ್, ಇಲ್ಲಿ ಸ್ನೇಹಿತರು, ಕುಟುಂಬ ಸದಸ್ಯರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ನೂರಾರು ಜನ ಕಂಡುಬರುತ್ತಾರೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಮಲೆನಾಡ ಅಧಿದೇವತೆ ಶ್ರೀ ಬಿಂಡಿಗ ದೇವಿರಮ್ಮ ಬೆಟ್ಟದ ಕಲಾಕೃತಿ, ಸಾಲುಮರದ ತಿಮ್ಮಕ್ಕನ ಪ್ರತಿಕೃತಿ ಕಾರ್ಯಕ್ರಮದ ಕೇಂದ್ರ ಬಿಂದುಗಳು ಎಂದರೆ ತಪ್ಪಾಗಲಾರದು.

ಇವುಗಳ ಜೊತೆಗೆ ಭದ್ರ ಬಾಲ್ಯ ಪರಿಕಲ್ಪನೆ, ಹಣ್ಣು ತರಕಾರಿಗಳ ಕೆತ್ತನೆ, ನಾದಾಲೋಕ, ಕನಸುಗಳ ಗೋಡೆ, ಐ ಲವ್ ಚಿಕ್ಕಮಗಳೂರು, ವೀಣೆ, ಹಣ್ಣಿನಲ್ಲಿ ಕೆತ್ತನೆ ಮಾಡಿರುವ ದೇವರ ವಿಗ್ರಹ, ಚಲನಚಿತ್ರ ನಟರಾದ ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಇನ್ನಿತರ ಕಲಾವಿದರ ಚಿತ್ರಗಳು, ಯುದ್ಧೋಪಕರಣಗಳು ಸೇರಿದಂತೆ ನೂರಾರು ಕಲಾಕೃತಿಗಳು ಆಕರ್ಷಕವಾಗಿವೆ.

ಕಳೆದ ವರ್ಷಕ್ಕಿಂತ ಈ ವರ್ಷ ವಿಶೇಷವಾಗಿ ಅತ್ಯಂತ ಮುತುವರ್ಜಿಯಿಂದ ಜನರಿಗೆ ಹಾಗೂ ಸಾರ್ವಜನಿಕರಿಗೆ ಇಷ್ಟವಾಗುವ ರೀತಿಯಲ್ಲಿ ಹಾಗೂ ಆಕರ್ಷಕವಾಗಿ ಹೊಸ ವಿಷಯಗಳೊಂದಿಗೆ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಒಟ್ಟಾರೆಯಾಗಿ, ಈ ಬಾರಿ ಚೈತ್ರೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಅದ್ಭುತ ಲೋಕವನ್ನೇ ಸೃಷ್ಟಿ ಮಾಡಿದೆ.

ಇದನ್ನೂ ನೋಡಿ: ತೇಜಸ್ವಿ ಜೀವನ ಕುರಿತ ಫಲಪುಷ್ಪ ಪ್ರದರ್ಶನ: 8.10 ಲಕ್ಷ ಮಂದಿಯಿಂದ ವೀಕ್ಷಣೆ, 2.85 ಕೋಟಿ ರೂ. ಹಣ ಸಂಗ್ರಹ